ಬಂಟ್ವಾಳ: ಮಂಗಳೂರಿನಿಂದ ಚಿಕ್ಕಮಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮೂಡಿಗೆರೆಗೆ ಟಿಕೆಟ್ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ಬಸ್ಸು ಬಿ.ಸಿ.ರೋಡು ತಲುಪುತ್ತಿದ್ದಂತೆ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.
ಮಂಗಳೂರಿನಿಂದ ಹೊಸದುರ್ಗಕ್ಕೆ ತೆರಳುತ್ತಿದ್ದ ಕೆಎ 19 ಎಫ್ 3184 ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ 45-50 ವರ್ಷದ ಅಪರಿಚಿತ ವ್ಯಕ್ತಿಯು ಮಂಗಳೂರಿನಿಂದ ಮೂಡಿಗೆರೆಗೆ ಟಿಕೆಟ್ ಮಾಡಿದ್ದು, ಬಸ್ ಬಿ.ಸಿ.ರೋಡ್ ತಲುಪುವ ಸಮಯ ವ್ಯಕ್ತಿಯು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯ ಹೊಟ್ಟೆ ಮೇಲೆ ಎರಡು ಆಪರೇಷನ್ ಆಗಿರುವ ಗುರುತು ಇರುತ್ತದೆ. ಪ್ರಸ್ತುತ ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ವ್ಯಕ್ತಿಯ ಮನೆಯವರ ಮಾಹಿತಿ ಲಭಿಸಿದ್ದು, ಮನೆಯವರು ಬಂದ ಬಳಿಕವೇ ಖಚಿತಪಡಿಸಲಿದ್ದೇವೆ ಎಂದು ಬಂಟ್ವಾಳ ನಗರ ಪೊಲೀಸರು ತಿಳಿಸಿದ್ದಾರೆ.