ಬಂಟ್ವಾಳ: ಮರಳು ವಾರ್, ಮತ್ತೆ ಶುರುವಾಗಿದೆ ಮರಳಿಗಾಗಿ ಕಿತ್ತಾಟ, ಹೊಡೆದಾಟ. ಅಧಿಕಾರಿಗಳ ತಲೆದಂಡ ಹೀಗೆ ಹತ್ತು ಹಲವಾರು ಸಂಗತಿಗಳು ಮರಳಿಗಾಗಿ ನಡೆದರೂ ಸರಕಾರ ಪ್ರತ್ಯೇಕ ಮರಳು ನೀತಿಯನ್ನು ಜಾರಿ ಮಾಡಿಲ್ಲ, ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಮರಳು ಸಿಗುತ್ತಿಲ್ಲ. ಹಿಂದಿನ ಜಿಲ್ಲಾಧಿಕಾರಿ ಅವರು ಮರಳಿನ ಅಕ್ರಮ ಸಾಗಾಟ ತಡೆಯಲು “ಆಪ್ ” ಮೂಲಕ ಪ್ರಯತ್ನ ಮಾಡಿದರಾದರೂ ಅದು ಯಾವುದೇ ಪ್ರಯೋಜನ ವಾಗಿಲ್ಲ.
ಸದ್ಯಕ್ಕೆ ಜಿಲ್ಲಾಧಿಕಾರಿ ಅದೇಶದಂತೆ ಮರಳುಗಾರಿಕೆಗೆ ಜಿಲ್ಲೆಯ ಲ್ಲಿ ತಾತ್ಕಾಲಿಕ ಬ್ರೇಕ್ ಸಿಕ್ಕಿದೆ ಅಂತ ಹೇಳಲಾಗುತ್ತಿದೆಯಾದರೂ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ಮರಳು ವ್ಯಾಪಾರದ ಗುತ್ತಿಗೆ ಪಡೆದು ಕೊಂಡ ವ್ಯಕ್ತಿಗಳ ಪ್ರಕಾರ ಜಿಲ್ಲಾಧಿಕಾರಿ ಯವರಿಗೆ ದೂರುಗಳು ಹೋದ ಹಿನ್ನೆಲೆಯಲ್ಲಿ ಎಲ್ಲಾ ಮರಳು ತೆಗೆಯಲು ಅನುಮತಿ ಇರುವ ಧಕ್ಕೆಗಳ ಮರುಪರಿಶೀಲನೆ ನಡೆಸುವಂತೆ ಗಣಿ ಇಲಾಖೆಗೆ ಸೂಚಿಸಿದ್ದರು.
ಆ ಹಿನ್ನೆಲೆಯಲ್ಲಿ ಸೋಮವಾರ ಗಣಿ ಇಲಾಖಾ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮರಳು ತೆಗೆಯಲು ಅನುಮತಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ಅದರೆ ಈ ಬಗ್ಗೆ ಸ್ಪಷ್ಟವಾದ ಮಾಹಿತಿಗಾಗಿ ಗಣಿ ಇಲಾಖೆಗೆ ಕರೆ ಮಾಡಿದಾಗ ಅಲ್ಲಿನ ಮಹಿಳಾ ಅಧಿಕಾರಿಯೋರ್ವರು ಕರೆ ಸ್ವೀಕರಿಸಿದ ಕೂಡಲೇ ಏನು ಕೇಳದೆ ನೀವು ಕಚೇರಿಗೆ ಬಂದು ಮಾತನಾಡಿ ಎಂದು ಕರೆ ಕಡಿತಗೊಳಿಸಿದರು. ಈ ಬಗ್ಗೆ ಮಾಹಿತಿಗಾಗಿ ಇನ್ನೋರ್ವ ಅಧಿಕಾರಿಯನ್ನು ಸಂಪರ್ಕಕ್ಕಾಗಿ ಕರೆ ಮಾಡಿದಾಗ ಅವರು ಕರೆ ಸ್ವೀಕಾರ ಮಾಡುತ್ತಿಲ್ಲ.
ಬಳ್ಳಾರಿಯಲ್ಲಿ ಗಣಿಧಣಿಗಳ ಮೂಲಕ ಸರಕಾರ ಒಂದು ಕಾಲದಲ್ಲಿ ನಡೆದಿದ್ದರೆ, ಪ್ರಸ್ತುತ ಮಂಗಳೂರು ಮರಳು ಧಣಿಗಳು ರಾಜಕೀಯದವರ ಜೊತೆಯಲ್ಲಿ ಸೇರಿಕೊಂಡು ಅಧಿಕಾರಿಗಳನ್ನು ಕೈಗೊಂಬೆಗಳಾಗಿ ಮಾಡಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸರಕಾರದ ಸರಿಯಾದ ಮರಳು ನೀತಿಯ ಅನುಷ್ಠಾನವಾಗದೇ ಇರುವುದರಿಂದ ಜಿಲ್ಲೆ ಸಹಿತ ಅನೇಕ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಮರಳಿನ ಸಮಸ್ಯೆ ಉದ್ಭವವಾಗಿದೆ.
ಮುತ್ತೂರಿನಲ್ಲಿ ಅಕ್ರಮ ಮರಳು ದಾಸ್ತಾನು: ಮಂಗಳೂರು ತಾಲೂಕಿನ ಮುತ್ತೂರು ಎಂಬಲ್ಲಿ ಖಾಸಗಿ ಜಮೀನನಲ್ಲಿ ಸುಮಾರು 500 ಲೋಡ್ ಮರಳು ಅಕ್ರಮವಾಗಿ ಗುತ್ತಿಗೆ ದಾರನೋರ್ವ ದಾಸ್ತಾನು ಮಾಡಿ ಇರಿಸಿದ್ದಾನೆ ಎಂದು ಅಲ್ಲಿನ ಸ್ಥಳೀಯರು ಗಣಿ ಇಲಾಖೆಗೆ ದೂರು ನೀಡಿದ್ದಾರೆ.
ಅದರಂತೆ ಗಣಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರಳು ದಾಸ್ತಾನನ್ನು ಪರಿಶೀಲನೆ ನಡೆಸಿ ಹೋಗಿದ್ದಾರೆ.
ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಯೊಂದನ್ನು ಗುತ್ತಿಗೆ ವಹಿಸಿದ್ದ ಈ ಗುತ್ತಿಗೆದಾರ ಪರವಾನಿಗೆ ಇಲ್ಲದೆ ಮುಲಾರಪಟ್ನ ಪಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆದು ಖಾಸಗಿ ಜಮೀನಿನಲ್ಲಿ ದಾಸ್ತಾನು ಇರಿಸಿ ಬಳಿಕ ಬೇರೆ ಬೇರೆ ಕೆಲಸಗಳಿಗೆ ಸಾಗಿಸುತ್ತಿದ್ದ ಎಂಬುದು ಇಲ್ಲಿನ ಸ್ಥಳೀಯರ ಆರೋಪ.
ಇಲ್ಲಿನ ಬಡ ಜನರು ಮನೆ ಕಟ್ಟಲು ಮರಳು ಸಿಗುತ್ತಿಲ್ಲ ಆದರೆ ಗುತ್ತಿಗೆದಾರರು ಸರಕಾರಿ ಇಲಾಖೆಯ ಕಾಮಗಾರಿಯ ಹೆಸರಿನಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ. ಒಟ್ಟಿನಲ್ಲಿ ಜನಸಾಮಾನ್ಯರು ಮನೆ ಸಹಿತ ಕಟ್ಟಡ ನಿರ್ಮಾಣಕ್ಕೆ ತೊಂದರೆ ಅನುಭವಿಸುದಂತು ತಪ್ಪಿಲ್ಲ.