ಬಂಟ್ವಾಳ: ತ್ಯಾಜ್ಯ ನಿರ್ವಹಣೆಗೆ ಎಲ್ಲರ ಸಹಕಾರ ಅಗತ್ಯವಿದೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾ.ಪಂ.ಮಟ್ಟದಲ್ಲಿ ಜನಪ್ರತಿನಿಧಿಗಳ ಜೊತೆ ಸಾರ್ವಜನಿಕರನ್ನು ಸೇರಿಸಿ ಅವರಿಗೆ ಜವಬ್ದಾರಿ ನೀಡಿ ಮನಪರಿವರ್ತನೆ ಮಾಡಿ ಎಂದು
ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಹೇಳಿದರು.
ಅವರು ಗುರುವಾರ ತಾ.ಪಂ. ಎಸ್.ಜಿ.ಆರ್.ಎಸ್.ವೈ. ಸಭಾಂಗಣದಲ್ಲಿ ಸ್ವಚ್ಚ ಭಾರತ್ ಮಿಷನ್, ತಾಲೂಕು ಸಹಭಾಗಿತ್ವದಲ್ಲಿ ಜಿ.ಪಂ.ಸದಸ್ಯರುಗಳು, ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರುಗಳು, ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರುಗಳು, ಸದಸ್ಯರುಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ “ಘನ ತ್ಯಾಜ್ಯ ನಿರ್ವಹಣಾ” ಕುರಿತಾದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಚ್ಚತೆಯನ್ನು ಯಶಸ್ವಿಯಾಗಿ ಮಾಡಲು ಮನಸ್ಸಿನಿಂದ ಆಗಬೇಕು ಹೊರತು, ಕೇವಲ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ ಎಂದರು.
ಸರಕಾರ ಅನೇಕ ವರ್ಷಗಳಿಂದ ಅನೇಕ ಕಾರ್ಯಕ್ರಮಗಳ ಮೂಲಕ ಪ್ರಯತ್ನ ನಡೆಸಿದರೂ ಕೂಡ ಸಫಲವಾಗಿಲ್ಲ, ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ ಎಂಬುದು ಬೇಸರದ ವಿಚಾರ. ಸರಕಾರದ ಜೊತೆ ನಾವೆಲ್ಲರೂ ಕೈಜೋಡಿಸಿ, ಸ್ಚಚ್ಚಗ್ರಾಮದ ಮೂಲಕ ಸ್ವಚ್ಚ ಭಾರತಕ್ಕೆ ನಾವು ಸಾಕ್ಷಿಯಾಗುವ ಎಂದು ಹೇಳಿದರು.

ಜಿ.ಪ.ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಕಂಬಳಿ ಮಾತನಾಡಿ, ಜನರಿಗೆ ಸರಿಯಾದ ಮಾಹಿತಿ ನೀಡುವ, ತಿಳುವಳಿಕೆ ನೀಡುವ ಕೆಲಸ ಅಧಿಕಾರಿಗಳಿಂದ ಅಗಬೇಕಾಗಿದೆ, ಮೊದಲು ನಾವು ಪರಿವರ್ತನೆ ಆಗಬೇಕು, ನಾವು ಮಾದರಿಯಾದಾಗ ಮಾತ್ರ ಸರಕಾರದ ಯೋಜನೆಗಳು ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತದೆ ಎಂದರು. ತ್ಯಾಜ್ಯ ನಿರ್ವಹಣೆಗೆ ತೊಡಕಾದಾಗ ಕಾನೂನು ಕ್ರಮಕೈಗೊಳ್ಳಲು ಅವರು ಅಧಿಕಾರಿಗಳಿಗೆ ತಿಳಿಸಿದರು.

ಉಪಾಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿ, ಪ್ರಾಮಾಣಿಕ ಪ್ರಯತ್ನ ಮಾಡಿದಾಗ ತ್ಯಾಜ್ಯ ನಿರ್ವಹಣೆಯಲ್ಲಿ ಸಫಲತೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಎಂ.ಎಸ್.ಮಹಮ್ಮದ್ ಮಾತನಾಡಿ, ಇಚ್ಛಾಶಕ್ತಿಯ ಕೊರತೆಯ ಕಾರಣವೇ ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದೇವೆ ಎಂದು ಹೇಳಿದರು. ‌ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ಅಗಬೇಕಾಗಿದೆ ಎಂದರು.

ಸ್ಥಾಯಿ ಸಮಿತಿಯ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಕಮಲಾಕ್ಷಿ ಕೆ.ಪೂಜಾರಿ, ಯೋಜನಾ ನಿರ್ದೇಶಕ ಮದುಕುಮಾರ್, ಜಿ.ಪಂ.ಸ್ವಚ್ಚ ಭಾರತ ಮಿಷನ್ ನ ಸಂಯೋಜಕಿ ಮಂಜುಳಾ ಉಪಸ್ಥಿತರಿದ್ದರು.

ಪ್ರಸ್ತಾವಿಕವಾಗಿ ಮಾತನಾಡಿದ ತಾ.ಪಂ. ಇ.ಒ.ರಾಜಣ್ಣ, 58 ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಘನತ್ಯಾಜ್ಯ ನಿರ್ವಹಣೆ ಮಾಡಲು ಮತ್ತು ತ್ಯಾಜ್ಯ ಮುಕ್ತ ಗ್ರಾಮವಾಗಿ ಮಾರ್ಪಾಡು ಮಾಡಲು ಅವಕಾಶಕ್ಕಾಗಿ ಈ ಕಾರ್ಯಗಾರ ಹಮ್ಮಿಕೊಂಡಿದೆ ಎಂದು ಹೇಳಿದರು.
ತ್ಯಾಜ್ಯ ನಿರ್ವಹಣೆ ಸಂದರ್ಭದಲ್ಲಿ ಅಗುವ ನ್ಯೂನತೆಗಳಿದ್ದರೆ ಅದನ್ನು ಯಾವ ರೀತಿಯಲ್ಲಿ ನಿರ್ವಹಣೆ ಮಾಡುವುದು ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಮಾರ್ಚ್ ತಿಂಗಳಿನಿಂದ ಎಲ್ಲಾ ಗ್ರಾ.ಪಂಗಳಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣವಾಗಲೇಬೇಕು ಈ ನಿಟ್ಟಿನಲ್ಲಿ ಮುಂದುವರಿಯಬೇಕು ಎಂದರು.

ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸ್ವಾಗತಿಸಿ, ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here