ಬಂಟ್ವಾಳ: ಶಾಲೆಯಲ್ಲಿ ಗೆಳೆಯರು ಹೊಡೆಯುತ್ತಾರೆ ಎಂಬ ನೆಪವೊಡ್ಡಿ ಎರಡು ದಿನಗಳ ಹಿಂದೆ ರಾಮನಗರದಿಂದ ತಪ್ಪಿಸಿಕೊಂಡು ಬಂದ ಬಾಲಕನೊಬ್ಬ ಬುಧವಾರ ಮೆಲ್ಕಾರ್ ನಲ್ಲಿ ಪತ್ತೆಯಾಗಿ ಬಳಿಕ ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರ ಸಮ್ಮುಖದಲ್ಲಿ ಪೋಷಕರ ಮಡಿಲು ಸೇರಿದ ಘಟನೆ ನಡೆದಿದೆ.
ಮನೆಯಿಂದ ತಪ್ಪಿಸಿದ್ದ ಬಾಲಕ ರಾಮನಗರದಿಂದ ರೈಲಿನಲ್ಲಿ ಬಂದಿದ್ದು, ಅಲ್ಲಿ ಆತನಿಗೆ ಕನಕಪುರ ನಿವಾಸಿ ಅಯ್ಯಪ್ಪ ಮಾಲಾಧಾರಿ ಸ್ವಾಮಿ ಸಿದ್ದರಾಮು ಅವರ ಪರಿಚಯವಾಗಿ ಬಳಿಕ ಅವರ ಬೆನ್ನ ಹಿಂದೆಯೇ ಬಂದು ಮೆಲ್ಕಾರ್ ನಲ್ಲಿ ಪತ್ತೆಯಾಗಿದ್ದಾನೆ. ಸ್ವಾಮಿಗಳು ಧರ್ಮಸ್ಥಳ ಹೋಗುವ ಉದ್ದೇಶದಿಂದ ಬಿ.ಸಿ.ರೋಡು ಇಳಿದು ಮೆಲ್ಕಾರ್ ಕಡೆಗೆ ಹೋಗುತ್ತಿದ್ದರು.
ತನ್ನ ಹಿಂದೆ ಬರಬೇಡ ಎಂದು ಹೇಳಿದರೂ ಕೇಳದೆ ಹಿಂದಿನಿಂದ ಹೋಗುತ್ತಿದ್ದ ವಿಚಾರ ಮೆಲ್ಕಾರ್ ನಲ್ಲಿದ್ದ ಪುರಸಭೆ ಪೌರ ಕಾರ್ಮಿಕರಿಗೆ ತಿಳಿದು ಅವರು, ಮಾನವ ಹಕ್ಕುಗಳ ಸಂರಕ್ಷಣೆ ವೇದಿಕೆಯ ಜಿಲ್ಲಾಧ್ಯಕ್ಷ ಇಕ್ಬಾಲ್ ಪರ್ಲಿಯಾ ಅವರಿಗೆ ತಿಳಿಸಿದ್ದಾರೆ.
ಇಕ್ಬಾಲ್ ಅವರು ತಮ್ಮ ಸಂಘಟನೆ ಹಾಗೂ ಇತರ ಸಂಘಟನೆಗಳ ಮೂಲಕ ರಾಮನಗರದಲ್ಲಿದ್ದ ಬಾಲಕನ ಪೋಷಕರನ್ನು ಪತ್ತೆಹಚ್ಚಿ ವಿಚಾರವನ್ನು ತಿಳಿಸಿದ್ದು, ಬಿ.ಸಿ.ರೋಡು ಬರುವಂತೆ ಹೇಳಿದ್ದಾರೆ. ರಾತ್ರಿ ಪೊಲೀಸ್ ಠಾಣೆಯಲ್ಲಿ ಬಾಲಕನನ್ನು ಪೋಷಕರಿಗೆ ಒಪ್ಪಿಸಲಾಗಿದೆ.