ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿರುವ ಚರಂಡಿಗಳ ಸಮಸ್ಯೆಗೆ ಮುಕ್ತಿ ಎಂಬುದೇ ಇಲ್ಲವಾಗಿದೆ. ಬಿ.ಸಿ.ರೋಡ್ ಸಹಿತ ಪುರಸಭಾ ವ್ಯಾಪ್ತಿಯ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಇರುವ ಚರಂಡಿಗಳಲ್ಲಿ ಸರಿಯಾಗಿ ಕೊಳಚೆ ನೀರು ಹರಿಯದೇ ಶೇಖರಗೊಂಡು ಪರಿಸರದಲ್ಲಿ ಗಬ್ಬು ವಾಸನೆ ಬೀರುತ್ತಿದೆ.

ಬಿ.ಸಿ.ರೋಡಿನಲ್ಲಿರುವ ನ್ಯಾಯಾಲಯ ಕಟ್ಟಡ ಸಂಕೀರ್ಣ ಆವರಣದ ಪ್ರವೇಶ ದ್ವಾರಕ್ಕೆ ತಾಗಿಕೊಂಡೇ ಇರುವ ಚರಂಡಿಯಲ್ಲಿ ಹೂಳು ತುಂಬಿದ್ದರಿಂದ ಕೊಳಚೆ ನೀರು ಸರಿಯಾಗಿ ಹರಿಯದೆ ಚರಂಡಿ ತುಂಬಾ ನಿಂತುಕೊಂಡಿದೆ. ಹಲವು ಸಮಯದಿಂದ ನೀರು ಹರಿಯದೆ ನಿಂತಲ್ಲೇ ನಿಂತಿರುವುದರಿಂದ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು ಪರಿಸರದಲ್ಲಿ ವಾಸನೆ ಬೀರುತ್ತಿದೆ.

ಈ ರಸ್ತೆಯಲ್ಲಿ ದಿನನಿತ್ಯ ನೂರಾರು ಮಂದಿ ನ್ಯಾಯಾಲಯ ಮತ್ತು ಇಲ್ಲೇ ಇರುವ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ತೆರಳುತ್ತಾರೆ. ಅಲ್ಲದೆ ನ್ಯಾಯಾಲಯ ಮತ್ತು ಪೊಲೀಸ್ ಠಾಣೆಗೆ ಹೋಗುವ ಜನರು ಇದೇ ಜಾಗದಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಾರೆ. ಹೊಟೇಲ್, ವಾಣಿಜ್ಯ ಕಟ್ಟಡಗಳೂ ಈ ಪ್ರದೇಶದಲ್ಲಿ ಇವೆ. ತೆರೆದ ಚರಂಡಿಯಲ್ಲಿ ಕೊಳಚೆ ನೀರು ತುಂಬಿರುವುದರಿಂದ ಇಲ್ಲಿನ ಪರಿಸರದಲ್ಲಿ ಕೆಟ್ಟ ವಾಸನೆ ಬೀರುತ್ತಿದ್ದು ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ.

ಸ್ವಚ್ಛತೆಯ ಹೆಸರಿನಲ್ಲಿ ಪುರಸಭೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಪುರಸಭೆ ವ್ಯಾಪ್ತಿಯ ಪ್ರಮುಖ ಪ್ರದೇಶಗಳ ಚರಂಡಿಗಳ ವ್ಯವಸ್ಥೆಯೇ ಹೀಗಾದರೆ ಉಳಿದ ಪ್ರದೇಶಗಳ ಸ್ಥಿತಿ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಪ್ರತೀ ವರ್ಷ ಚರಂಡಿಗಳ ದುರಸ್ತಿಗೆ ಕೋಟ್ಯಾಂತರ ರೂ. ಖರ್ಚು ಮಾಡಲಾಗುತ್ತಿದೆ. ಆದರೆ ಚರಂಡಿ ವ್ಯವಸ್ಥೆ ಮಾತ್ರ ಪರಿಹಾರವಾಗುವುದಿಲ್ಲ. ಹಾಗಾದರೆ ಖರ್ಚು ಮಾಡುವ ಸಾರ್ವಜನಿಕರ ಹಣಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪುರಸಭೆಗೆ ಚುನಾವಣೆ ನಡೆದ ಬಳಿಕ ಕಾರಣಾಂತರಗಳಿಂದ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಇನ್ನೂ ನಡೆದಿಲ್ಲ‌. ಸದಸ್ಯರು ಇದ್ದೂ ಇಲ್ಲದಂತಾಗಿದ್ದಾರೆ. ಹೀಗಾಗಿ ಪುರಸಭೆಯ ಆಡಳಿತ ಸಂಪೂರ್ಣವಾಗಿ ಅಧಿಕಾರಿಗಳ ಕೈಯಲ್ಲಿದೆ. ಈ ನಡುವೆ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ಕಸ ವಿಲೇವಾರಿ, ಸ್ವಚ್ಛತೆ, ಹೀಗೆ ಹತ್ತು ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ. ಇದರಲ್ಲಿ ಚರಂಡಿಗಳ ಸಮಸ್ಯೆ ದೊಡ್ಡದಾಗಿ ತಾಂಡವಾಡುತ್ತಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here