ಬಂಟ್ವಾಳ : ಸಂಘಟನೆಗಳ ಮುಖಾಂತರವಾಗಿ ಒಬ್ಬ ವೃತ್ತಿಪರನು ಕೆಲಸ ಮಾಡುವುದರಿಂದ ಆ ವ್ಯಕ್ತಿ ಆರ್ಥಿಕವಾಗಿ ಸದೃಢನಾಗಬಲ್ಲ. ಸಂಘಟನೆಯನ್ನು ಕಟ್ಟುವುದರಿಂದ ಆ ಸಂಘಟನೆಗೆ ಸಂಬಂಧಪಟ್ಟ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತದೆ ಎಂದು ಬಿ.ಸಿ.ರೋಡಿನ ನ್ಯಾಯವಾದಿ ಅಶ್ವನಿ ಕುಮಾರ್ ರೈ ಹೇಳಿದರು.
ಅವರು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಭಾನುವಾರ ಬಂಟ್ವಾಳ ಪ್ರಿಂಟರ್ಸ್ ಅಸೋಸಿಯೇಶನ್ ವತಿಯಿಂದ ನಡೆದ ಡಿಜಿಟಲ್ ಪ್ರಿಂಟ್ ಎಕ್ಸ್ಪೋ- 2020 ಇದರ ಉದ್ಘಾನೆಯನ್ನು ಮಾಡಿ ಮಾತನಾಡಿ, ಮುದ್ರಣ ರಂಗವು ಆಧುನಿಕ ಬೆಳವಣಿಗೆಗೆ ತೆರೆದುಕೊಳ್ಳುತ್ತಿರುವ ಇಂತಹ ಸಂದರ್ಭದಲ್ಲಿ ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ಅರ್ಥಪೂರ್ಣವಾಗುತ್ತದೆ ಎಂದರು. ದೀಪ ಬೆಳಗಿಸುವ ಮೂಲಕ ಸಾಂಕೇತಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ತಮ್ಮ ಸಹಿಯನ್ನು ದಾಖಲಿಸುವ ಮೂಲಕ ಉದ್ಘಾಟಿಸಲಾಯಿತು.
ಅಸೋಸಿಯೇಶನ್ ಅಧ್ಯಕ್ಷ ಈಶ್ವರ ಕುಮಾರ್ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು. ವರ್ತಕರ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಸ್ ಚಂದ್ರ ಜೈನ್, ಅಸೋಸಿಯೇಶನ್ ಸ್ಥಾಪಕಾಧ್ಯಕ್ಷ ಲಿಯೋ ಬಾಸಿಲ್ ಫೆರ್ನಾಂಡಿಸ್, ನಿಕಟಪೂರ್ವ ಅಧ್ಯಕ್ಷ ನಾಗರಾಜ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪಾಧ್ಯಕ್ಷ ವಿದ್ಯಾಧರ ಜೈನ್ ಮತ್ತು ಲಯನ್ ದಾಮೋದರ್ ಬಿ.ಎಂ ಇವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.
ಶ್ರೀಶ ಪ್ರಾರ್ಥಿಸಿದರು. ಅಸೋಸಿಯೇಶನ್ ಜತೆ ಕಾರ್ಯದರ್ಶಿ ಹರೀಶ್ ಸ್ವಾಗತಿಸಿ, ಕಾರ್ಯದರ್ಶಿ ಯಾದವ ಕುಲಾಲ್ ಧನ್ಯವಾದ ಸಮರ್ಪಿಸಿದರು. ಎಸೋಸಿಯೇಶನ್‌ನ ಸದಸ್ಯ ಮಿಥುನ್ ಕಾರ್ಯಕ್ರಮ ನಿರೂಪಿಸಿದರು.
ಡಿಜಿಟಲ್ ಎಕ್ಸ್ಪೋದಲ್ಲಿ ಮಾರುತಿ ಆಫೀಸ್ ಅಟೋಮೇಶನ್ ಮೈಸೂರು, ಶ್ರೀ ಭಾರತಿ ಸಿಸ್ಟಮ್ಸ್ ಮಂಗಳೂರು, ಥೋನ್ಸೆ ಎಂಟರ್‌ಪ್ರೈಸಸ್ ಮಂಗಳೂರು, ಎಡ್ವಾಂಟೇಜ್ ಕುಂದಾಪುರ ಮಂಗಳೂರು, ಸೆಲ್ಕೋ ಮಂಗಳೂರು, ಅನಿಲ್ ಕಂಪ್ಯೂಟರ್‍ಸ್ ಬಿ.ಸಿ.ರೋಡು ಇವರಿಂದ ವಿವಿಧ ಡಿಜಿಟಲ್ ಯಂತ್ರಗಳ ಪ್ರಾತ್ಯಕ್ಷಿಕೆ ನಡೆಯಿತು. ಉಡುಪಿ ಹಾಗೂ ದ.ಕ. ಜಿಲ್ಲೆಯ ನಾನಾ ಭಾಗಳಿಂದ ಮುದ್ರಣ ಸಂಸ್ಥೆಯ ಮಾಲಕರು ಹಾಗೂ ಮುದ್ರಣಾಸಕ್ತರು ಆಗಮಿಸಿದ್ದರು.
ಎಕ್ಸ್ಪೋ ವಿಶೇಷತೆ : ಉದ್ಘಾಟನಾ ಸಮಾರಂಭದ ಛಾಯಾಚಿತ್ರವನ್ನು ಡಿಜಿಟಲ್ ಯಂತ್ರದಲ್ಲಿ ಕ್ಷಣ ಮಾತ್ರದಲ್ಲಿ ಮುದ್ರಿಸಿ ಉದ್ಘಾಟಕರಿಗೆ ನೀಡಲಾಯಿತು. ಸೋಲಾರ್ ಮುದ್ರಣ ಯಂತ್ರದಿಂದ ಮುದ್ರಿಸಲಾಯಿತು. ಪಿಲ್ಲೋ ಕವರ್ ಮುದ್ರಣ, ಛತ್ರಿಯ ಮೇಲೆ ಭಾವಚಿತ್ರ ಮುದ್ರಣ, ಕಾಗದದ ಎರಡೂ ಬದಿಯಲ್ಲಿ ಒಂದೇ ಬಾರಿ ಮುದ್ರಣ ಹೀಗೆ ಎಲ್ಲಾ ಕಂಪೆನಿಗಳ ವಿಶಿಷ್ಠತೆಗಳನ್ನು ಪ್ರಾತ್ಯಕ್ಷಕೆ ಮಾಡಲಾಯಿತು.