ಬಂಟ್ವಾಳ: ಪುರಸಭೆಯಲ್ಲಿ ಆಡಳಿತ ವ್ಯವಸ್ಥೆ ಇಲ್ಲದೆ ಇರುವ ಕಾರಣ ಅವರು ಮಾಡಿದ್ದೇ ಕೆಲಸ, ಆಡಿದ್ದೇ ಮಾತು. ಹೇಳುವವರು ಇಲ್ಲ ಕೇಳುವವರು ಇಲ್ಲ ಎಂಬ ಸ್ಥಿತಿ.
ದೂರು ನೀಡಲು ಬಂದರೆ ನಿರಾಕರಣೆ, ಸಮಸ್ಯೆ ಹೇಳಿದರೆ ದರ್ಪದ ಮಾತು, ಇದು ಬಂಟ್ವಾಳ ಪುರಸಭೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಸನ್ನಿವೇಶ.

ಹೌದು ಪುರಸಭೆಗೆ ಕುಡಿಯುವ ನೀರಿನ ಸಮಸ್ಯೆಯಿದೆ ಎಂದು ದೂರು ನೀಡಲು ಹೋದ ಮಹಿಳೆಯ ದೂರು ಸ್ವೀಕರಿಸದೆ ವಾಪಾಸು ಕಳುಹಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ ದೂರು ಪಡೆಯದಿದ್ದರೂ ಪರವಾಗಿಲ್ಲ ನೀರಿನ ಸಮಸ್ಯೆಯಿದೆ, ಸರಿಪಡಿಸಿ ಕೊಡಿ ಎಂದು ಹೇಳಿದ ಅವರಿಗೆ ಅಲ್ಲಿನ ಇಂಜಿನಿಯರ್ ದರ್ಪದ ಮಾತಗಳ ಮೂಲಕ ಮನನೋಯಿಸಿ ಕಳುಹಿಸಿದ್ದಾರೆ ಎಂದು ಅವರು ಮಾಧ್ಯಮದವರ ಜೊತೆ ಹೇಳಿದ್ದಾರೆ.
ಮೇ ಅಂತ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವುದು ಸಾಮಾನ್ಯ, ಅದರೆ ಇಲ್ಲಿ ಜನವರಿ ತಿಂಗಳಲ್ಲಿಯೇ ನೀರಿನ ಸಮಸ್ಯೆ ಉಂಟಾಗಿರುವುದು ಮಾತ್ರ ವಿಪರ್ಯಾಸವೇ ಸರಿ.

ಜಕ್ರಿಬೆಟ್ಟು ಎಂಬಲ್ಲಿ ಕಳೆದ ಒಂದು ತಿಂಗಳಿನಿಂದ ಅಲ್ಲಿನ ಅನೇಕ ಮನೆಗಳಿಗೆ ಕುಡಿಯುವ ನೀರಿನ ಸರಬರಾಜು ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೂರು ನೀಡಲು ಹೋದವರಿಗೆ ಪುರಸಭೆಯಲ್ಲಿ ಅಧಿಕಾರಿಗಳಿಂದ ಅಗಿರುವ ಅನ್ಯಾಯವನ್ನು ಹೇಳಿಕೊಂಡಿದ್ದಾರೆ.
ಜಕ್ರಿಬೆಟ್ಟು ಎಂಬಲ್ಲಿ ರಸ್ತೆಯ ಕಾಮಗಾರಿಯಿಂದ ಪೈಪ್ ಲೈನ್ ತುಂಡಾಗಿದೆ ಸರಿ ಮಾಡಿಕೊಡುತ್ತೇವೆ ಎಂದು ಒಂದು ತಿಂಗಳಿನಿಂದ ಹೇಳಿಕೊಂಡು ಬಂದಿದ್ದಾರೆ ವಿನಃ ಇವತ್ತಿನವರೆಗೂ ಕುಡಿಯುವ ನೀರು ಬಂದಿಲ್ಲ. ದೂರು ನೀಡಿದರೆ ಸ್ವೀಕಾರ ಮಾಡುವುದಿಲ್ಲ, ಸಮಸ್ಯೆ ಹೇಳಿಕೊಂಡರೆ ಅಧಿಕಾರಿಗಳ ದರ್ಪದ ಮಾತು ನಾವು ಏನು ಮಾಡಬೇಕೆಂದು ಅಲ್ಲಿನ ಜನರ ಪ್ರಶ್ನೆಯಾಗಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಹಿತ ಬಂಟ್ವಾಳ ಪುರಸಭಾ ವ್ಯಾಪ್ತಿಯ ಜನರಿಗೆ ಬೇರೆ ಬೇರೆ ಯೋಜನೆಗಳ ಮೂಲಕ ದಿನದ 24 ಗಂಟೆಯ ಕಾಲ ನೀರು ಒದಗಿಸುವ ಭರವಸೆ ಕೇವಲ ಕನಸು ಮಾತ್ರವೇ ಸರಿ. ನೇತ್ರಾವತಿ ನದಿ ಅಂಗಳದಲ್ಲಿ ಹರಿಯುತ್ತಿದ್ದರೂ ಬಂಟ್ವಾಳದ ಜನತೆಗೆ ಕುಡಿಯುವ ನೀರಿನ ಸಮಸ್ಯೆ . ಪುರಸಭಾ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಇಂತಹ ದ್ದೇ ನೀರಿನ ಸಮಸ್ಯೆಗಳಿವೆ ಆದರೆ ಬೆಳಕಿಗೆ ಬಾರದೆ ಉಳಿದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಶಾಸಕರು, ಜಿಲ್ಲಾಧಿಕಾರಿಗಳು ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವ ಮನೆಗಳಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆ ಕೈಗೊಳ್ಳಬೇಕಾಗಿದೆ. ಜೊತೆಗೆ ಅಲ್ಲಿನ ಅಧಿಕಾರಿಗಳ ವರ್ತನೆಯ ಬಗ್ಗೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಸರಿಪಡಿಸುವ ಕೆಲಸ ಕೂಡಾ ಮಾಡಬೇಕಾಗಿದೆ ಎಂಬುದು ಸಾರ್ವಜನಿಕ ಆಗ್ರಹವಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here