ಬಂಟ್ವಾಳ: ಗ್ರಾಮೀಣ ಭಾಗಗಳಲ್ಲಿ ಸಾಮಾನ್ಯವಾಗಿ ರಸ್ತೆಗಳಲ್ಲಿ ಹೊಂಡ ಬಿದ್ದರೆ ಅದರ ದುರಸ್ತಿ ಕ್ರಮಕೈಗೊಳ್ಳುವುದು ಕಡಿಮೆ. ಆದರೆ ಪ್ರಸ್ತುತ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಂಟ್ವಾಳ ಹಾಗೂ ಬಿ.ಸಿ.ರೋಡು ಪೇಟೆಯಲ್ಲೇ ರಸ್ತೆಗಳಲ್ಲಿ ಕೆಲವೊಂದು ಸೃಷ್ಟಿಯಾಗಿದ್ದರೂ, ಇನ್ನೂ ದುರಸ್ತಿಯಾಗಿಲ್ಲ ಎಂದು ಆರೋಪಗಳು ಕೇಳಿಬರುತ್ತಿದೆ.

ಬಂಟ್ವಾಳ ನಗರದಲ್ಲಿ ಸಾಗುವ ಮುಖ್ಯರಸ್ತೆಯ ಕೆಲವೊಂದು ಭಾಗಗಳಲ್ಲಿ ಅಲ್ಲಲ್ಲಿ ಹೊಂಡಗಳು ಸೃಷ್ಟಿಯಾಗಿದ್ದು, ವಾಹನಗಳ ಸಾಗಾಟಕ್ಕೆ ತೊಂದರೆಯಾಗುತ್ತಿದೆ. ಬಿ.ಸಿ.ರೋಡಿನಿಂದ ಕೈಕುಂಜೆಗೆ ರಸ್ತೆಯಲ್ಲಿ ಬಿ.ಸಿ.ರೋಡು ಜಂಕ್ಷನ್‌ನಲ್ಲೇ ಸಾಕಷ್ಟು ಹೊಂಡಗಳು ಸೃಷ್ಟಿಯಾಗಿದ್ದು, ವಾಹನಗಳು ಎದುಬಿದ್ದು ಸಾಗುತ್ತಿದೆ. ಇದರ ಜತೆಗೆ ಇತರ ಒಳರಸ್ತೆಗಳ ಹೊಂಡಗಳಿಗೂ ಮುಕ್ತಿ ನೀಡಬೇಕಿದೆ. ಬಿ.ಸಿ.ರೋಡು ಜಂಕ್ಷನ್‌ನಿಂದ ಮಿನಿ ವಿಧಾನಸೌಧದವರೆಗೂ ಸಾಕಷ್ಟು ಹೊಂಡಗಳಿವೆ. ತಾ.ಪಂ. ಸಂಪರ್ಕ ರಸ್ತೆಯಲ್ಲೂ ಹೊಂಡ ಸೃಷ್ಟಿಯಾಗಿದೆ. ಇವುಗಳಿಗೆ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪುಗೊಂಡಿದ್ದರೂ, ತಾತ್ಕಾಲಿಕ ಪರಿಹಾರ ನೀಡುವ ನಿಟ್ಟಿನಲ್ಲಿ ಕನಿಷ್ಠ ತೇಪೆ ಕಾರ್ಯವನ್ನಾದರೂ ಮಾಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಅಧಿಕಾರಿಗಳ ಸಹಿತ ಜನಪ್ರತಿನಿಧಿಗಳು ಈ ರಸ್ತೆಯ ಮೂಲಕ ದಿನಕ್ಕೆ ಅನೇಕ ಬಾರಿ ಓಡಾಟ ನಡೆಸಿದರೂ ಅವರ ಕಣ್ಣಿಗೆ ಕಾಣದಂತಾಗಿರುವುದು ಖೇಧಕರ. ತಹಶೀಲ್ದಾರ್ ಕಚೇರಿ ಸಹಿತ ಕೋರ್ಟ್ ಹೀಗೆ ಅನೇಕ ಇಲಾಖೆಗಳ ಅಧಿಕಾರಿಗಳು ಸಹಿತ ಜನಪ್ರತಿನಿಧಿಗಳು ಈ ಗುಂಡಿಗೆ ಬಿದ್ದು ಎದ್ದು ಹೋದರೂ ಕೂಡಾ ಮೌನವಹಿಸಿರುವುದರ ಬಗ್ಗೆ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಬಂಟ್ವಾಳ ಬೈಪಾಸ್ ಮೂಲಕ ಸಾಗುವ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ, ಹೆದ್ದಾರಿಯಲ್ಲಿ ಸಾಗಬೇಕಿರುವ ಹೆಚ್ಚಿನ ಸಂಖ್ಯೆಯ ವಾಹನಗಳು ಬಂಟ್ವಾಳ ಪೇಟೆಯ ಮೂಲಕವೇ ಸಾಗುತ್ತಿರುವುದರಿಂದ ಶೀಘ್ರ ಹೊಂಡಗಳ ಕುರಿತು ಕ್ರಮಕೈಗೊಳ್ಳಬೇಕಿದೆ.


ಮಳೆಗಾಲದ ದುರಸ್ತಿಯಾಗಿಲ್ಲ.!
ಕಳೆದ ಮಳೆಗಾಲದಲ್ಲೇ ಈ ಹೊಂಡಗಳು ಕಂಡುಬಂದಿದ್ದು, ಅದರಲ್ಲಿ ನೀರು ನಿಂತ ಪರಿಣಾಮ ವಾಹನಗಳು ಸಾಗುವ ವೇಳೆ ನೀರು ಎರಚಿ ಪಾದಚಾರಿಗಳು ಒದ್ದೆಯಾದ ಘಟನೆಯೂ ನಡೆದಿತ್ತು. ನೀರು ನಿಂತು ಹೊಂಡಗಳಿರುವುದು ತಿಳಿಯದೆ ವಾಹನ ಚಾಲಕರು, ಸವಾರರಿಗೂ ತೊಂದರೆಯುಂಟಾಗಿತ್ತು.
ಸಾಮಾನ್ಯವಾಗಿ ಮಳೆಯ ಕಾರಣದಿಂದ ಹಾನಿಯಾದ ರಸ್ತೆಗಳಿಗೆ ತೇಪೆ ಕಾರ್ಯ ನಡೆಯುತ್ತದೆಯಾದರೂ, ಇಲ್ಲಿ ಮಾತ್ರ ತೇಪೆ ಕಾರ್ಯವೂ ನಡೆದಿಲ್ಲ. ಹೆದ್ದಾರಿಯ ಸಮಸ್ಯೆಗಳಿಗೆ ಮುಕ್ತಿ ಸಿಕ್ಕರೂ ನಗರ ಒಳಭಾಗದ ರಸ್ತೆಗಳಲ್ಲಿ ಹೊಂಡ ತೊಂದರೆ ಸಾಕಷ್ಟಿದೆ. ಹೀಗಾಗಿ ಈ ಕುರಿತು ಪುರಸಭೆ ಗಮನಹರಿಸಬೇಕಿದೆ ಎಂದು ಜನತೆ ಅಭಿಪ್ರಾಯಿಸುತ್ತಿದ್ದಾರೆ.


ರಸ್ತೆಯಲ್ಲೇ ಮ್ಯಾನ್‌ಹೋಲ್
ಬಿ.ಸಿ.ರೋಡಿನಿಂದ ಬಂಟ್ವಾಳ ಪೇಟೆಗೆ ಸಾಗುವ ರಸ್ತೆಯಲ್ಲಿ ಮೇಲ್ಭಾಗಕ್ಕೆ ಕಾಣುವ ರೀತಿಯಲ್ಲಿ ರಸ್ತೆಯಲ್ಲೇ ಮ್ಯಾನ್‌ಹೋಲ್‌ಗಳಿದ್ದು, ಇದು ಕೂಡ ವಾಹನಗಳ ಸಾಗಾಟಕ್ಕೆ ತೊಂದರೆ ನೀಡುತ್ತಿದೆ. ರಸ್ತೆಯ ಹೊಂಡಗಳು, ಮ್ಯಾನ್‌ಹೋಲ್‌ಗಳು ದೊಡ್ಡ ವಾಹನಗಳ ಸಾಗಾಟಕ್ಕೆ ತೊಂದರೆ ನೀಡದೇ ಇದ್ದರೂ, ಸಣ್ಣ ವಾಹನಗಳಿಗೆ ಸಾಕಷ್ಟು ತೊಂದರೆ ನೀಡುತ್ತಿದೆ. ಪೈಪ್ ಕಾಮಗಾರಿಯ ವೇಳೆ ರಸ್ತೆಯನ್ನು ಅಗೆದು ಹಾಗೇ ಬಿಡುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿದೆ. ಪುರಸಭೆ ಆಡಳಿತ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಶಾಸಕರಿಂದ ಅಗಬೇಕಾಗಿದೆ. ಪುರಸಭೆಯ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ರಸ್ತೆಗಳಲ್ಲಿ ಹೊಂಡಗುಂಡಿಗಳಿದ್ದು ಇದರ ದುರಸ್ತಿ ಕಾರ್ಯಗಳು ನಡೆಯುತ್ತಿಲ್ಲ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here