ಬಂಟ್ವಾಳ: ಕರಿಂಜೆ ಶ್ರೀ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಫೆ.9ರಿಂದ 19ರವರೆಗೆ ನೂತನ ಗರ್ಭಗುಡಿಯಲ್ಲಿ ಶ್ರೀದೇವರ ಪುನರ್ ಪ್ರತಿಷ್ಠೆ, ಅಷ್ಟಬಂಧ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ಅಷ್ಟಪವಿತ್ರ ನಾಗಮಂಡಲ ಹಾಗೂ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಿಂದ ಫೆ.9ರಂದು ಮಧ್ಯಾಹ್ನ 12.30ಕ್ಕೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿದ ವಸ್ತುಗಳೊಂದಿಗೆ ತಾಲೂಕಿನ ಪ್ರತಿಯೊಂದು ಗ್ರಾಮಗಳಿಂದ ವಾಹನಗಳು  ಆ ಹೊತ್ತಿಗೆ ಬಿ.ಸಿ.ರೋಡಿನಲ್ಲಿ ಒಟ್ಟಾಗಿ ಸಮಾವೇಶಗೊಳ್ಳಬೇಕಿದೆ.

ಈ ವಿಷಯವನ್ನು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಮತ್ತು ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಹೊರೆಕಾಣಿಕೆ ಸಮಿತಿ ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ ಮಂಗಳವಾರ ಸಂಜೆ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು.

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿ, ಕ್ಷೇತ್ರದಲ್ಲಿ ನಾನಾ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳೂ ಪ್ರತಿ ದಿನ ನಡೆಯಲಿದ್ದು, ಹಿಂದು ಬಾಂಧವರು ಒಗ್ಗೂಡಿ ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಶ್ರಮಿಸಬೇಕು ಹಿಂದು ಸಮಾಜದ ಎಲ್ಲ ಸ್ವಾಮೀಜಿಗಳೂ ಮತ್ತು ಸಮುದಾಯ ಕಾರ್ಯಕ್ರಮದ ಯಶಸ್ವಿಗೊಳಿಸಲು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ಕ್ಷೇತ್ರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತರು ಒತ್ತಡರಹಿತವಾಗಿ ಮನಃಪೂರ್ವಕವಾಗಿ ಪಾಲ್ಗೊಳ್ಳಿ, ಅಳಿಲ ಸೇವೆಯಿಂದ ಆಂಜನೇಯ ಸೇವೆವರೆಗಿನ ಪಾಲ್ಗೊಳ್ಳುವಿಕೆಯೂ ಗಮನಾರ್ಹವಾಗುತ್ತದೆ ಎಂದರು. ವೇದಿಕೆಯಲ್ಲಿ ಮಡಿವಾಳ ಸಮಾಜದ ಅಧ್ಯಕ್ಷ ಎನ್. ಶಿವ ಉಪಸ್ಥಿತರಿದ್ದರು. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಸಾಮಾಜಿಕ ಮುಖಂಡ, ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಮಾತನಾಡಿದರು. ಕ್ಷೇತ್ರದ ಪರಿಚಯವನ್ನು ಮುಖಂಡ ತಾರಾನಾಥ ಕೊಟ್ಟಾರಿ ಮಾಡಿದರು. ಕಲಾವಿದ ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ರಾಜಾ ಬಂಟ್ವಾಳ ವಂದಿಸಿದರು. ಈ ಸಂದರ್ಭ ನಾನಾ ಸಂಘ, ಸಂಸ್ಥೆಗಳ ಸದಸ್ಯರು, ಪ್ರಮುಖರಾದ ಮಚ್ಚೇಂದ್ರ ಸಾಲ್ಯಾನ್, ಮನೋಜ್ ನಾಣ್ಯ, ಭರತ್ ಕುಮ್ಡೇಲು ಮತ್ತಿತರರು ಉಪಸ್ಥಿತರಿದ್ದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here