ಬಂಟ್ವಾಳ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ತಾಲೂಕಿನ 43 ಶೃದ್ದಾಕೇಂದ್ರಗಳಿಗೆ ಒಣ ಮತ್ತು ಹಸಿ ಕಸದ ಬುಟ್ಟಿ ಹಾಗೂ ಜನಮಂಗಲ ಕಾರ್ಯಕ್ರಮದಡಿ 84 ಮಂದಿ ವಿಕಲಚೇತನ ಫಲಾನುಭವಿಗಳಿಗೆ ಸಲಕರಣೆಗಳ ವಿತರಣಾ ಕಾರ್ಯಕ್ರಮ ಸೋಮವಾರ ಬಂಟ್ವಾಳ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಉಡುಪಿ ಕರಾವಳಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶೃದ್ದಾಕೇಂದ್ರಗಳಿಗೆ ಸಾಂಕೇತಿಕವಾಗಿ ಕಸದ ಬುಟ್ಟಿಯನ್ನು ವಿತರಿಸಿದರು.
ಬಳಿಕ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿಯ ಪರಿಕಲ್ಪನೆಯಡಿ ಧರ್ಮಸ್ಥಳದಂತೆ ದೇಶದ ಇತರ ಶೃದ್ದಾ ಕೇಂದ್ರಗಳು ಸ್ವಚ್ಚತೆಯಿಂದಿರಬೇಕೆಂದು ರಾಜ್ಯದ ಸುಮಾರು 10 ಸಾವಿರ ಶೃದ್ದಾಕೇಂದ್ರಗಳಿಗೆ  1.50 ಕೋ.ರೂ.ವೆಚ್ಚದಲ್ಲಿ ಒಣ ಮತ್ತು ಹಸಿಕಸಗಳ ಸಂಗ್ರಹಣೆಗೆ ತಲಾ ಎರಡು ಬುಟ್ಟಿಯನ್ನು ವಿತರಿಸಲಾಗಿದೆ.ಹಾಗೆಯೇ ರಾಜ್ಯದ 4200 ಮಂದಿ ವಿಕಲಚೇತನ ಫಲಾನುಭವಿಗಳಿಗೆ ಸುಮಾರು 1 ಕೋ.ರೂ.ವೆಚ್ಚದಲ್ಲಿ ಸಲಕರಣೆಯನ್ನು ವಿತರಿಸಲಾಗಿದ್ದು,ಇನ್ನು 1ಸಾವಿರ ಮಂದಿಯ ಬೇಡಿಕೆ ಇದ್ದು,ಇವರನ್ನು ಕೂಡ ಪರಿಗಣಿಸಲಾಗುತ್ತದೆ ಎಂದರು.ಗ್ರಾಮಾಭಿವೃದ್ಧಿ ಯೋಜನೆ ಸಾಲ ನೀಡುವ ಸಂಸ್ಥೆಯಲ್ಲ, ಇದೊಂದು ನೊಂದವರು, ನಿರ್ಗತಿಕರು,ದುರ್ಬಲರಿಗೆ ಸಹಾಯ ಮಾಡುವ ಮತ್ತು ಸಮಾಜಮುಖಿ ಕಾರ್ಯವನ್ನು ನಡೆಸುವಂತ ಸಂಸ್ಥೆಯಾಗಿದೆ ಎಂದರು. ಅತಿಥಿಯಾಗಿದ್ದ ಜಿಪಂ ಸದಸ್ಯ ತುಂಗಪ್ಪ ಬಂಗೇರ ಅವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಡೆಸಲಾಗುವ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.
ಜನಜಾಗೃತಿ ವೇದಿಕೆಯ ಬಿ.ಸಿ.ರೋಡ್ ವಲಯಾಧ್ಯಕ್ಷ ರೋನಾಲ್ಡ್ ಡಿಸೋಜ ಅಮ್ಟಾಡಿ ಸಭಾಧ್ಯಕ್ಷತೆ ವಹಿಸಿದ್ದರು. ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಮಾಧವ ವಳವೂರು, ನಿಕಟಪೂರ್ವ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ವಲಯಾಧ್ಯಕ್ಷರಾದ ಶೇಖರ ಸಾಮಾನಿ, ಪ್ರಸಾದ್ ವೇದಿಕೆಯಲ್ಲಿದ್ದರು.
ಗ್ರಾಮಾಭಿವೃದ್ದಿ ಯೋಜನೆಯ ಬಂಟ್ವಾಳ ತಾ.ಯೋಜನಾಧಿಕಾರಿ ಜಯಾನಂದ ಪಿ. ಸ್ವಾಗರಿಸಿದರು. ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಪ್ರಸ್ತಾವಿಸಿ ಜಿಲ್ಲೆಯ 472 ಶೃದ್ದಾಕೇಂದ್ರಗಳಿಗೆ ಮೊದಲ ಹಂತದಲ್ಲಿ ಕಸದ ಬುಟ್ಟಿಯನ್ನು ವಿತರಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಪ್ರಥಮ ಹಂತವಾಗಿ 43 ಶೃದ್ದಾ ಕೇಂದ್ರಗಳಿಗೆ ಕಸದಬುಟ್ಟಿ ವಿತರಿಸಲಾಗಿದ್ದು, 170 ಮಂದಿ ವಿಕಲಚೇತನರಿಗೆ ವೀಲ್ ಚೇಯರ್, ವಾಟರ್ ಬೆಡ್ ಸಹಿತ ವಿವಿಧ ಸಲಕರಣೆಗಳನ್ನು ವಿತರಿಸಲಾಗಿದೆ.ಶೃದ್ದಾಕೇಂದ್ರಗಳ ಮುಖ್ಯಸ್ಥರು ಕಸದ ಬುಟ್ಟಿಯನ್ನು ಸದುಪಯೋಗಪಡಿಸಿ ಡಾ.ಹೆಗ್ಗಡೆಯವರ ಪರಿಕಲ್ಪನೆಯಂತೆ ದೇವಸ್ಥಾನಗಳಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕೆಂದರು.                       ಇದೇ ವೇಳೆ ಬಂಟ್ವಾಳ ವಿಶ್ವಕರ್ಮ ಸಮುದಾಯಭವನ ನಿರ್ಮಾಣಕ್ಕೆ 5 ಲಕ್ಷ ರೂ.ವಿನ ಸಹಾಯಧನದ ಮಂಜೂರಾತಿಪತ್ರವನ್ನು ವಿಶ್ವಕರ್ಮ ಸಮುದಾಯದ ಪ್ರಮುಖರಿಗೆ ಹಸ್ತಾಂತರಿಸಲಾಯಿತು. ಮೇಲ್ವಿಚಾರಕಿಯರಾದ ಅಮಿತಾ ವಂದಿಸಿದರು. ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here