ವಿಟ್ಲ: ಬಾಲಕಿಯೋರ್ವಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪುಣಚ ಗ್ರಾಮದ ಮನೋಹರ ಬಂಧಿತ ಆರೋಪಿಯಾಗಿದ್ದಾರೆ. ಆರೋಪಿ ಅದೇ ಗ್ರಾಮ ಏಳನೇ ತರಗತಿಯ ಬಾಲಕಿಯನ್ನು ಸುಮಾರು ಒಂದು ವರ್ಷದಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದು, ಫೆ.2ರಂದು ಬಾಲಕಿಯು ಪರಿಯಾಲ್ತಡ್ಕ ಪೇಟೆಗೆ ಹೋಗಿ ಸಾಮಾಗ್ರಿಗಳನ್ನು ತೆಗೆದುಕೊಂಡು ವಾಪಾಸ್ ಬರುತ್ತಾ ಪುಣಚ ಗ್ರಾಮದ ತೋರಣಕಟ್ಟೆ ಎಂಬಲ್ಲಿ ಒಬ್ಬಳೇ ನಿಂತಿರುವಾಗ ಆರೋಪಿಯು ಮೋಟಾರ್ ಸೈಕಲ್ ನಲ್ಲಿ ಬಂದು ಕಿರುಕುಳ ನೀಡಿದ್ದ. ಈ ಕುರಿತು ಫೆ.21ರಂದು ಬಾಲಕಿಯ ಹೆತ್ತವರು ನೀಡಿದ ದೂರಿನಂತೆ ವಿಟ್ಲ ಠಾಣಾ ಪೊಲೀಸರು ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.