


ಅಡ್ಯನಡ್ಕ: ಆದಿವಾಸಿ ಬುಡಕಟ್ಟು ಜನಾಂಗಗಳಿಂದಾಗಿ ದೇಶದ ಸಂಸ್ಕೃತಿ ಉಳಿದುಕೊಂಡಿದೆ. ಸಮಾಜದ ಗುರುತಿಸುವಿಕೆಯನ್ನು ಸಂಘಗಳ ಮೂಲಕ ಯುವ ಸಮುದಾಯಕ್ಕೆ ನೀಡುವ ಅನಿವಾರ್ಯತೆ ಇದೆ. ಜಾತಿ ಸಂಘಟನೆಗಳು ಸಮಾಜದ ಆರ್ಥಿಕ ಸ್ವಾವಲಂಬನೆಯನ್ನು ಗಟ್ಟಿಗೊಳಿಸಲು ಅನಿವಾರ್ಯ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಶನಿವಾರ ಅಡ್ಯನಡ್ಕ ಶ್ರೀ ಮಹಮ್ಮಾಯಿ ಮರಾಟಿ ಸಂಘದ ನೂತನ ಶ್ರೀ ಮಹಮ್ಮಾಯಿ ಸಭಾಭವನ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಆರ್ಥಿಕವಾಗಿ ಹಿಂದುಳಿದ ಸಮಾಜದ ಜನರು ಮುಂದುವರಿಯಲು ಸರಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಸಚಿವರ ಹಾಗೂ ಸಂಸದರ ಅನುದಾನ ಒದಗಿಸಲು ಬೇಕಾದ ಕ್ರಮ ತೆಗೆದುಕೊಳ್ಳಲಾಗುವುದು. ಸಭಾಭವನಕ್ಕೆ ೫ ಲಕ್ಷ ಹಾಗೂ ರಸ್ತೆ ಅಭಿವೃದ್ಧಿಗೆ 5 ಲಕ್ಷವನ್ನು ಸರಕಾರದ ವತಿಯಿಂದ ನೀಡಲಾಗುವುದು ಎಂದು ತಿಳಿಸಿದರು.
ಫಲಕ ಅನಾವರಣಗೊಳಿದ ದ. ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ ಸರಕಾರದ ಸೌಲಭ್ಯಗಳನ್ನು ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರಿಗೂ ಇದೆ. ಸಾಧಿಸಬೇಕೆಂಬ ಛಲವಿದ್ದಾಗ ಉತ್ತಮ ಕಾರ್ಯಗಳನ್ನು ಮಾಡಲು ಸಾಧ್ಯ. ಸರ್ವರ ಸಹಕಾರದ ಮೂಲಕ ಸಮುದಾಯ ಮುಂದೆ ಬಂದು ಸಭಾಭವನ ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ ಕುಕ್ಕೆಬೆಟ್ಟು, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯೆ ಜಯಶ್ರೀ ಕೋಡಂದೂರು, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯೆ ಕವಿತಾ ಸುಬ್ಬ ನಾಯ್ಕ, ಕೇಪು ಪಂಚಾಯಿತಿ ಉಪಾಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ನೆಕ್ಕರೆ, ಸದಸ್ಯರಾದ ಪುಷ್ಪಾಕರ ರೈ ಚೆಲ್ಲಡ್ಕ, ಅಬ್ದುಲ್ ಕರೀಮ್ ಕುದ್ದುಪದವು, ವಿಠಲ ನಾಯ್ಕ ಕೋಪ್ರೆ, ಕುದ್ದುಪದವು ದಿವ್ಯಶಕ್ತಿ ಯುವಕ ಮಂಡಲದ ಗೌರವ ಸಲಹೆಗಾರ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಲಲಿತಾ ಶಿವಪ್ಪ ನಾಯ್ಕ ಕೋಡಂದೂರು, ಸಂಘದ ಅಧ್ಯಕ್ಷ ಗೋವಿಂದ ನಾಯ್ಕ ನೆಗಳಗುಳಿ, ಕಾರ್ಯದರ್ಶಿ ಸುರೇಶ್ ನಾಯ್ಕ ಕೋಡಂದೂರು, ಸಂಚಾಲಕ ಗೋಪಾಲ ನಾಯ್ಕ ಇರಾಯಿಮೂಲೆ ಮತ್ತಿತರರು ಉಪಸ್ಥಿತರಿದ್ದರು.
ಶ್ರೀಜಾ ವಿ. ಪ್ರಾರ್ಥಿಸಿದರು. ಗೌರವಾಧ್ಯಕ್ಷ ಐತ್ತಪ್ಪ ನಾಯ್ಕ ಸ್ವಾಗತಿಸಿದರು. ಉಪಾಧ್ಯಕ್ಷ ಚಂದಪ್ಪ ನಾಯ್ಕ ಕೆಳಗಿನಪದವು ಪ್ರಸ್ತಾವನೆಗೈದರು. ಉಪಾಧ್ಯಕ್ಷ ಕುಂಞ ನಾಯ್ಕ ವಂದಿಸಿದರು. ಕೋಶಾಧಿಕಾರಿ ತಿಮ್ಮಪ್ಪ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಸೂರ್ಯನಾರಾಯಣ ಕೇಕುಣ್ಣಾಯ ಅವರ ಪೌರೋಹಿತ್ಯದಲ್ಲಿ ಗಣಪತಿ ಹವನ, ಶ್ರೀ ಸತ್ಯನಾರಾಯಣ ದೇವರ ಪೂಜೆ, ಸಾಯಂಕಾಲ ಶ್ರೀ ದೂರ್ಗಾ ಪೂಜೆ, ಸಾಂಸ್ಕೃತಿಕ ಕಲಾ ವೈಭವ, ರಾತ್ರಿ ಕೇಪು ಮೈರ ಶ್ರೀ ದುರ್ಗಾ ಕಲಾ ತಂಡದ ಪುಗರ್ತೆಕಲಾವಿದರು ವಿಟ್ಲ ಅಭಿನಯದ ಆರ್ ತೂಪೆರ್ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.


