ವಿಟ್ಲ: ಉದ್ಯೋಗ ಎಲ್ಲಾ ಕಾಲದಲ್ಲಿ ಭದ್ರತೆಯನ್ನು ಒದಗಿಸುವುದಿಲ್ಲ. ಕೃಷಿ ಚಟುವಟಿಕೆ ಬದುಕಿನಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಶಿಕ್ಷಕ ವೃತ್ತಿ ಎಂಬುದು ಬಹಳ ಸೂಕ್ಷ್ಮದ್ದಾಗಿದ್ದು, ಉತ್ತಮ ಶಿಕ್ಷಕ ಪರಂಪರೆಯನ್ನು ಹಾಕಿ ಕೊಟ್ಟ ವ್ಯಕ್ತಿ ಹಾಗೂ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಪೂರ್ವ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಹೇಳಿದರು.
ಅವರು ಸಾರಡ್ಕ ಆರಾಧನಾ ಕಲಾ ಭವನದಲ್ಲಿ ಸಾಹಿತಿ, ಅಧ್ಯಾಪಕ, ಕೃಷಿಕ, ಸಮಾಜಸ್ನೇಹಿ ವಾಟೆ ಮಹಾಲಿಂಗ ಭಟ್ಟರ ಸಾರ್ಥಕ ಜೀವನ ಸಂಚಯ ’ಸಾಧನಾ ಪಥಿಕ ವಾಟೆ’ ಕೃತಿ ಬಿಡುಗಡೆ ಮತ್ತು ಅಭಿವಂದನೆ ಕಾರ್ಯಕ್ರಮದಲ್ಲಿ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು. ಬಡತನದ ಕಾರಣಕ್ಕಾಗಿ ವ್ಯಕ್ತಿ ಘನತೆಗೆ ನೋವು ಮಾಡುವ ಕಾರ್ಯವಾಗಬಾರದು. ಕೃತಿ ಅನುಭವವನ್ನು ಒರೆಗೆ ಹಚ್ಚುವ ಜತೆಗೆ ವಿಷಾದದ ಭಾವವನ್ನು ಹುಟ್ಟಿಸಿದರೆ, ಅದು ಉತ್ತಮ ಪುಸ್ತಕವಾಗುತ್ತದೆ. ಅನೇಕ ಕ್ಷೇತ್ರಗಳಲ್ಲಿ ಆಸಕ್ತಿ ಇಟ್ಟುಕೊಂಡು ಕೆಲಸ ಮಾಡಿದಾಗ ಅದು ಒಂದಕ್ಕೊಂದು ಪೂರಕವಾಗುತ್ತದೆ. ವಾಟೆಯವರ ಈ ಕೃತಿ ಆತ್ಮಕಥನವಲ್ಲ, ಸಮಾಜ ದಾಟಿ ಬಂದ ಸಾಂಸ್ಕೃತಿಕ ಚರಿತ್ರೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಸತ್ಯಶಂಕರ ಉಪಾಧ್ಯಾಯ ಮಣಿಮುಂಡ ಉದ್ಘಾಟಿಸಿದರು. ವಾಟೆ ಮಹಾಲಿಂಗ ಭಟ್ – ಮಹಾಲಕ್ಷ್ಮೀ ದಂಪತಿಗಳನ್ನು ಅಭಿವಂದನೆ ಮಾಡಿ ಸನ್ಮಾನಿಸಲಾಯಿತು. ಕುಟುಂಬಿಕರು, ಬಂಧುಗಳು ಹಾಗೂ ಅಭಿಮಾನಿಗಳಿಂದ ಗೌರವಾರ್ಪಣೆ ನಡೆಯಿತು.
ಬೆಳಗ್ಗೆ ಗೀತಾ ಸಂಕರ್ ಸಾರಡ್ಕ ಹಾಗೂ ಅನುರಾಧ ಅಡ್ಕಸ್ಥಳ ಅವರ ಶಿಷ್ಯವೃಂದದಿಂಡ ಶಾಸ್ತ್ರೀಯ ಸಂಗೀತ ನಡೆಯಿತು. ಮಧ್ಯಾಹ್ನ ರಂಜಿತಾ ಎಲ್ಲೂರು ಮತ್ತು ಬಳಗದವರಿಂದ ಯಕ್ಷ ನೃತ್ಯ- ಮದಿರಾಕ್ಷ ಶೃಂಗಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತು ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಿದ್ದರು. ಮಂಗಳೂರು ಬೆಸೆಂಟ್ ಕಾಲೇಜು ಪೂರ್ವ ಪ್ರಾಚಾರ್ಯ ಡಾ. ಎಂ. ಪ್ರಭಾಕರ ಜೋಶಿ ಪುಸ್ತಕ ಕುರಿತು ಮಾತನಾಡಿದರು. ಮುಂಬಯಿ ವಿಶ್ವವಿದ್ಯಾನಿಲಯದ ವಿಶ್ರಾಂತ ವಿಭಾಗ ಮುಖ್ಯಸ್ಥ ಡಾ. ತಾಳ್ತಜೆ ವಸಂತ ಕುಮಾರ ಮಾತನಾಡಿದರು.
ಶರಧಿ ಪ್ರಾರ್ಥಿಸಿದರು. ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ಉಜಿರೆ ಅಶೋಕ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಎ. ಜಿ. ಭೀಮಪ್ರಕಾಶ್ ಸನ್ಮಾನ ಪತ್ರ ವಾಚಿಸಿದರು. ಡಾ. ರವಿಶಂಕರ್ ವಂದಿಸಿದರು. ಲೇಖಕ ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here