ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜ.14 ರಿಂದ 22 ರ ತನಕ ಕಾಲಾವಧಿ ಜಾತ್ರೋತ್ಸವ ನಡೆಯಲಿದೆ. ಈ ಮಧ್ಯೆ ಜಾತ್ರೋತ್ಸವದಲ್ಲಿ ಸಂತೆ ನಡೆಸಲು ಹಿಂದೂವೇತರ ವ್ಯಾಪಾರಸ್ಥರಿಗೆ ಅವಕಾಶವಿಲ್ಲ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಲಿದ್ದು, ಇದಕ್ಕೆ ಯಾರೂ ವಿಚಲಿತರಾಗ ಬೇಡಿ ಎಂದು ವಿಟ್ಲ ಪಟ್ಟಣ ಪಂಚಾಯತ್ ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದೆ.
ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಪಟ್ಟಣ ಪಂಚಾಯತ್ ಜಾತ್ರೋತ್ಸವದ ಸಂತೆ ವ್ಯಾಪಾರ ಪ್ರತಿವರ್ಷವೂ ಪಟ್ಟಣ ಪಂಚಾಯತ್ ಗೆ ಒಳಪಟ್ಟ ಸ್ಥಳದಲ್ಲಿ ಜಾತ್ಯಾತೀತವಾಗಿ ನಡೆಯುತ್ತಿದೆ. ಈ ಬಾರಿಯೂ ಹೀಗೆಯೇ ನಡೆಯಲಿದ್ದು, ಗಣೇಶ್ ಶೆಣೈ ಎಂಬವರು ಏಲಂ ಮೂಲಕ ಈ ಸಂತೆ ವ್ಯಾಪಾರವನ್ನು ಪಡೆದುಕೊಂಡಿದ್ದಾರೆ. ಆದುದರಿಂದ ಪ್ರತೀ ವರ್ಷದಂತೆ ಈ ವರ್ಷದಂತೆ ಈ ಬಾರಿಯೂ ನಿರ್ಭೀತಿಯಿಂದ ಸಂತೆ ವ್ಯಾಪಾರ ಮಾಡಬಹುದು. ಸಂತೆ ವ್ಯಾಪಾರ ನಡೆಸಲು ಇಚ್ಛೆ ಇರುವವರು 7760238712 ಮೊ. ಸಂಖ್ಯೆಯನ್ನು ಸಂಪರ್ಕಿಸ ಬಹುದು ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷೆ ದಮಯಂತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಟ್ಲ ಜಾತ್ರೋತ್ಸವದಲ್ಲಿ ಹಿಂದುಗಳಿಗೆ ಮಾತ್ರ ಸಂತೆ ವ್ಯಾಪಾರ ಮಾಡಬಹುದು ಎಂಬ ಸಾಮಾಜಿಕ ಜಾಲತಾಣ ಸಂದೇಶ ಊಹಾಪೋಹವಾಗಿದ್ದು, ಎಂದಿನಂತೆ ಅಧಿಕೃತ ಪರವಾನಿಗೆ ಹೊಂದಿದವರ ಒಪ್ಪಗೆ ಪ್ರಕಾರ ಸಂತೆ ವ್ಯಾಪಾರ ಮಾಡಬಹುದು. ಸಾಮಾಜಿಕ ಶಾಂತಿ ಕದಡುವ ದುರುದ್ದೇಶದಿಂದ ಯಾರೋ ಕಿಡಿಗೇಡಿಗಳು ಈ ರೀತಿಯ ಸಂದೇಶಗಳನ್ನು ಕಳುಹಿಸಿ ಗೊಂದಲ ಸೃಷ್ಟಿಸಿದ್ದಾರೆ. ಭಯವಿಲ್ಲದೇ ನ್ಯಾಯಯುತವಾಗಿ ವ್ಯಾಪಾರ ಮಾಡಬಹುದು ಎಂದು ವಿಟ್ಲ ಪೊಲೀಸ್ ಠಾಣೆಯ ಉಪ ನಿರೀಕ್ಷಕ ವಿನೋದ್ ರೆಡ್ಡಿ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.