


ವಿಟ್ಲ: ದೇವರ ಸ್ಮರಣೆಯೊಂದಿಗೆ ಹತ್ತು ಜನರು ಏಕ ಮನಸ್ಸಿನಿಂದ ಒಟ್ಟಾಗಿ ತೇರನ್ನು ಎಳೆಯುವ ಕಾರ್ಯವಾಗಬೇಕಿದೆ. ಮನೋರಂಜನೆಗಿಂತ ಆತ್ಮರಂಜನೆಗೆ ಒತ್ತು ನೀಡುವ ಜಾತ್ರೋತ್ಸವ ಅರ್ಥಪೂರ್ಣವೆನಿಸುತ್ತದೆ. ಧಾರ್ಮಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ತ್ರಿವೇಣಿ ಸಂಗಮದಂತೆ ಒಡಿಯೂರು ರಥೋತ್ಸವ ಸಂಪನ್ನಗೊಳ್ಳಲಿದೆ ಎಂದು ಒಡಿಯೂರುಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಗುರುವಾರ ಒಡಿಯೂರು ಗುರುದೇವದತ್ತ ಸಂಸ್ಥಾನದಲ್ಲಿ ಫೆಬ್ರವರಿ 3 ಮತ್ತು 4 ರಂದು ನಡೆಯಲಿರುವ ಶ್ರೀ ಒಡಿಯೂರು ರಥೋತ್ಸವ –
ತುಳುನಾಡ್ದ ಜಾತ್ರೆ 2020ರ ಪ್ರಯುಕ್ತ ಕ್ಷೇತ್ರದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿದರು. ಮಕ್ಕಳನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಂಪೂರ್ಣವಾಗಿ ಸಹಭಾಗಿಗಳನ್ನಾಗಿಸುವಂತೆ, ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವಂತೆ ಪ್ರೇರೇಪಿಸುವ ಕಾರ್ಯ ಜಾತ್ರೋತ್ಸವದ ಮೂಲಕ ನಡೆಯಬೇಕಿದೆ. ಒಟ್ಟಂದದಲ್ಲಿ ಒಡಿಯೂರು ತುಳುನಾಡ್ದ ಜಾತ್ರೆ ಸೇವೆಯ ಸಂದೇಶ ನೀಡುವಂತಾಗಬೇಕು ಎಂದು ಹೊಸ ಸಮಿತಿಗಳ ಪದಾಧಿಕಾರಿಗಳಿಗೆ ತಿಳಿಸಿದರು.
ಜಾತ್ರೋತ್ಸವದ ರೂಪುರೇಷೆಗಳ ಬಗ್ಗೆ ವಸಂತ ಕುಮಾರ್ ಪೆರ್ಲ ವಿವರ ನೀಡಿದರು. ಜಾತ್ರೋತ್ಸವ ನಿರ್ವಹಣೆಗೆ ಇಪ್ಪತ್ತು ಹೊಸ ಪ್ರಧಾನ ಸಮಿತಿಗಳನ್ನು ರಚಿಸಲಾಯಿತು.
ಸಮಾರಂಭದಲ್ಲಿ ಶ್ರೀ ಸಂಸ್ಥಾನದ ಸಾಧ್ವಿ ಶ್ರೀಮಾತಾನಂದಮಯಿ, ಒಡಿಯೂರು ಗುರುದೇವ ಬಳಗದ ಅಧ್ಯಕ್ಷ ಅಶೋಕ್ ಕುಮಾರ್ ಬಿಜೈ, ಒಡಿಯೂರು ಗ್ರಾಮವಿಕಾಸ ಯೋಜನೆಯ ನಿರ್ದೇಶಕ ಕಿರಣ್, ಹಿರಿಯ ಪತ್ರಕರ್ತ ಜಯರಾಮ್ ರೈ ಮಲಾರು, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ ಶೆಟ್ಟಿ, ಕನ್ಯಾನ ಗ್ರಾಮ ಸಮಿತಿ ಅಧ್ಯಕ್ಷ ರಘುರಾಮ ಶೆಟ್ಟಿ ಕನ್ಯಾನ, ಕರೋಪಾಡಿ ಗ್ರಾಮ ಸಮಿತಿ ಅಧ್ಯಕ್ಷ ರಘುನಾಥ ಶೆಟ್ಟಿ ಪಟ್ಲಗುತ್ತು, ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ ಉಪಸ್ಥಿತರಿದ್ದರು. ಸದಾಶಿವ ಅಳಿಕೆ ವಂದಿಸಿದರು, ಯಶವಂತ ವಿಟ್ಲ ನಿರೂಪಿಸಿದರು.


