ವಿಟ್ಲ ಪ.ಪಂ. ಸಾಮಾನ್ಯ ಸಭೆಯಲ್ಲಿ ದೀರ್ಘ ಚರ್ಚೆ
ವಿಟ್ಲ : ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ ಮಕ್ಕಳಿಗೆ ಸರಕಾರದಿಂದ ನೀಡುವ ವಿದ್ಯಾರ್ಥಿ ವೇತನವನ್ನು ವಿತರಿಸಲು ತಾರತಮ್ಯ ಮಾಡಿದ್ದು ಎಷ್ಟು ಸಮಂಜಸ..? ನಮಗೆ ಈ ಬಗ್ಗೆ ಮಾಹಿತಿ ನೀಡದೇ ಸಮಾರಂಭ ಮಾಡಿದ್ದೇಕೆ ಎಂದು ಸದಸ್ಯ ಲೋಕನಾಥ ಶೆಟ್ಟಿ ಕೊಲ್ಯ ಪ್ರಶ್ನಿಸಿದರು.
ವಿಟ್ಲ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಪ್ರಶ್ನೆಯನ್ನು ಎತ್ತಿದ ಅವರು ಕೇವಲ 6 ಮಂದಿ ಪ.ಪಂ.ಸದಸ್ಯರ ವ್ಯಾಪ್ತಿಯ ಫಲಾನುಭವಿಗಳಿಗೆ ಚೆಕ್ ವಿತರಿಸಿದ್ದು ಸರಿಯಲ್ಲ. ಶಾಸಕರು ಅನೇಕ ಮಂದಿಗೆ ಚೆಕ್ ವಿತರಿಸಿದ್ದು, ಮತ್ತೆ ನೀವು ಮಾತ್ರ ಮತ್ತೊಂದು ಸಮಾರಂಭ ಮಾಡಿದ್ದೇಕೆ ? ಇನ್ನು ನಾವು ಹನ್ನೆರಡು ಮಂದಿ ಸದಸ್ಯರ ವ್ಯಾಪ್ತಿಯ ಫಲಾನುಭವಿಗಳಿಗೆ ಪ್ರತ್ಯೇಕವಾಗಿ ಧನಸಹಾಯ ವಿತರಣೆ ಮಾಡಬೇಕೇ ? ಎಂದು ಮತ್ತೆ ಪ್ರಶ್ನಿಸಿದರು. ಇದಕ್ಕೆ ಮಾಜಿ ಅಧ್ಯಕ್ಷ ಅರುಣ್ ಎಂ.ವಿಟ್ಲ, ಪ.ಪಂ.ಸದಸ್ಯರಾದ ರವಿಪ್ರಕಾಶ್, ಮಂಜುನಾಥ ಕಲ್ಲಕಟ್ಟ, ಶ್ರೀಕೃಷ್ಣ ವಿಟ್ಲ ಅವರೂ ದನಿಗೂಡಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಅಧ್ಯಕ್ಷೆ ದಮಯಂತಿ ಅವರು ಮಾತನಾಡಿ, ಆ ಬಗ್ಗೆ ಆಮೇಲೆ ಮಾತನಾಡೋಣ. ಅಜೆಂಡಾ ಪ್ರಕಾರ ಚರ್ಚಿಸೋಣ. ಆದರೆ ನಾನು ಎಲ್ಲರಿಗೂ ಮಾಹಿತಿ ನೀಡಲು ಸಿಬಂದಿಗೆ ತಿಳಿಸಿದ್ದೇನೆ ಎಂದರು. ಆದರೆ ಬಿಜೆಪಿ ಸದಸ್ಯರು ಈ ಮಾತಿಗೆ ಸಮಾಧಾನರಾಗದೇ, ಅಧ್ಯಕ್ಷರು ಸುಳ್ಳು ಹೇಳುತ್ತಿದ್ದಾರೆ. ಸದಸ್ಯ ರವಿಪ್ರಕಾಶ್ ಅವರು ೧೨ ಮಂದಿ ಸದಸ್ಯರಿಗೆ ಮಾತ್ರ ಏಕೆ ಫೋನ್ ಸಿಗಲಿಲ್ಲ ಎಂದು ಟೀಕಿಸಿ, ಇನ್ನೊಮ್ಮೆ ಶಾಸಕರು ಬಂದಾಗ ಚೆಕ್ ವಿತರಿಸೋಣ ಎಂದರು. ಆಗ ಹಿರಿಯ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ ಅವರು ಆಕ್ಷೇಪಿಸಿ, ಎಲ್ಲರಿಗೂ ಚೆಕ್ ವಿತರಿಸಿ ಆಗಲಿಲ್ಲ. ಇನ್ನೊಮ್ಮೆ ವಿತರಿಸೋಣ, ಸಭೆ ಮುಂದುವರಿಸೋಣ ಎಂದರು. ಆದರೆ ಆ ಬಗ್ಗೆ ಸಹಮತಕ್ಕೆ ಬರಲಾಗಲಿಲ್ಲ.
ಅಧ್ಯಕ್ಷರು ಮಾತನಾಡಿ, ಆ ಬಗ್ಗೆ ಕ್ರಮಕೈಗೊಳ್ಳುತ್ತೇವೆ. ಎಲ್ಲರಿಗೂ ಮಾಹಿತಿ ನೀಡಿ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದ ಬಳಿಕ ಸಾಮಾನ್ಯ ಸಭೆ ಆರಂಭವಾಯಿತು.
ಪ.ಪಂ.ಮುಖ್ಯಾಧಿಕಾರಿ ಮಾಲಿನಿ ಅವರು ಮಾತನಾಡಿ, ಕನಿಷ್ಠ ಶೇ.೧೫ರಷ್ಟು ತೆರಿಗೆ ಏರಿಸುವುದಕ್ಕೆ ಸಭೆ ಒಪ್ಪಿಗೆ ನೀಡಬೇಕು ಎಂದರು. ಆದರೆ ಬಿಜೆಪಿ ಸದಸ್ಯರು ಒಪ್ಪಲಿಲ್ಲ. ಮಾಜಿ ಅಧ್ಯಕ್ಷ ಅರುಣ್ ವಿಟ್ಲ ಮತ್ತು ಸದಸ್ಯ ರಾಮದಾಸ್ ಶೆಣೈ ಅವರು ಮಾತನಾಡಿ, ಮನೆಗಳಿಗೆ ತೆರಿಗೆ ಹೆಚ್ಚಿಸುವುದಕ್ಕೆ ವಿರೋಧವಿದೆ ಎಂದರು. ಹಿರಿಯ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ ಅವರು ತೆರಿಗೆ ಹೆಚ್ಚಿಸದೇ ಇದ್ದಲ್ಲಿ ಸರಕಾರದಿಂದ ಮಂಜೂರಾಗುವ ಅನುದಾನ ಕಡಿಮೆಯಾಗುತ್ತದೆ ಎಂದರು.
ಕೊನೆಗೆ ಈ ಬಗ್ಗೆ ಚರ್ಚಿಸಲು ಸ್ಥಾಯಿ ಸಮಿತಿ ಸಭೆಗೂ ಮುನ್ನ ವಿಶೇಷ ಸಭೆ ಕರೆಯುವ ನಿರ್ಣಯ ಕೈಗೊಳ್ಳಲಾಯಿತು.
ಸದಸ್ಯ ಅಬ್ದುಲ್‌ರಹಿಮಾನ್ ನೆಲ್ಲಿಗುಡ್ಡೆ ಅವರು ಮಾತನಾಡಿ. ಪಂಚಾಯತ್ ಆರ್‌ಐ ಅವರು ವಾರಕ್ಕೆರಡು ದಿನ ಆಗಮಿಸುತ್ತಿರುವುದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಾಗರಿಕರು ಚಿಕ್ಕಪುಟ್ಟ ಕೆಲಸಗಳಿಗೂ ಐದಾರು ಬಾರಿ ಓಡಾಡುವಂತಾಗಿದೆ ಎಂದರು.
ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ಕೃಷ್ಣಪ್ಪ, ಪ.ಪಂ.ಸದಸ್ಯರಾದ ಚಂದ್ರಕಾಂತಿ ಶೆಟ್ಟಿ, ಸುನೀತಾ ಕೋಟ್ಯಾನ್, ಗೀತಾ ಪುರಂದರ, ಲತಾ ಅಶೋಕ್, ಸಂಧ್ಯಾ ಮೋಹನ್, ಇಂದಿರಾ ಅಡ್ಡಾಳಿ, ಪಕೀರ ಮೂಲ್ಯ, ಸಿಬಂದಿ ರತ್ನಾ ಉಪಸ್ಥಿತರಿದ್ದರು.