ಬಂಟ್ವಾಳ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ 95ರ ಹರೆಯದ ಶ್ಯಾಮರಾಯ ಆಚಾರ್ ಅವರನ್ನು ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್. ಅವರು ಮಂಗಳವಾರ ರಾತ್ರಿ ಕಲ್ಲಡ್ಕದ ಶಿಲ್ಪಾ ಸದನ ನಿವಾಸದಲ್ಲಿ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ಕಳೆದ ಆಗಸ್ಟ್ ಆ.14 ರಂದು ಶಿವಮೊಗ್ಗದಿಂದ ಹೊರಟಿದ್ದ ಇವರು ಬಿ.ಸಿ.ರೋಡಿನಲ್ಲಿ ಆ.15 ರಂದು ನಡೆಯಬೇಕಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಇವರು ಬಸ್ಸಿನಲ್ಲಿ ಬರುತ್ತಿದ್ದ ವೇಳೆ ಆಗುಂಬೆ ಬಳಿ ಬಸ್ಸಿನಿಂದ ಇಳಿದವರು, ಆಕಸ್ಮಿಕವಾಗಿ ಬಿದ್ದು ಸೊಂಟದ ಭಾಗದಲ್ಲಿ ಎಲುಬಿಗೆ ತೊಂದರೆ ಉಂಟಾಗಿ ಒಂದು ಶಸ್ತ್ರ ಚಿಕಿತ್ಸೆ ನಡೆದಿತ್ತು. ಇದೀಗ ವಾರದ ಹಿಂದೆ ಕಾಲಿನ ಶಸ್ತ್ರ ಚಿಕಿತ್ಸೆ ನಡೆದಿದ್ದು, ಕಲ್ಲಡ್ಕದ ಮಗಳ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಈ ವಿಚಾರ ತಿಳಿದ ತಹಶೀಲ್ದಾರ್ ರಶ್ಮೀ ಅವರು ಮಂಗಳವಾರ ರಾತ್ರಿಯೇ ಕಲ್ಲಡ್ಕಕ್ಕೆ ಆಗಮಿಸಿ ಹಿರಿಜೀವದ ಯೋಗಕ್ಷೇಮ ವಿಚಾರಿಸಿದರು. ತನ್ನ ಭೇಟಿಗೆ ತಾಲೂಕು ದಂಡಾಧಿಕಾರಿಗಳು ಬಂದಿರುವುದಕ್ಕೆ ಸಂತಸದಿಂದ ಅತೀವ ಭಾವುಕರಾದ ಶ್ಯಾಮರಾಯ ಆಚಾರ್ ಅವರು, ನಿಮ್ಮಂತ ಯುವ ಅಧಿಕಾರಿಗಳ ಸೇವೆ ಎಲ್ಲರಿಗೂ ಮಾದರಿಯಾಗಲಿ ಎಂದರು. ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್ ಅವರು, ದೊಡ್ಡ ಸರ್ಜರಿಯ ನೋವನ್ನೂ ಮರೆತು, ನಗು ಮುಖದೊಂದಿಗೆ ಜೀವನದ ಹೋರಾಟ ನಡೆಸುತ್ತಿರುವ ಶ್ಯಾಮರಾಯ ಆಚಾರ್ಯರ ನಗುಮುಖವೇ ನಮಗೆಲ್ಲಾ ಸ್ಪೂರ್ತಿ, ಜ.26 ರ ಗಣರಾಜ್ಯೋತ್ಸವಕ್ಕೆ ಬಿ.ಸಿ.ರೋಡಿಗೆ ತಾಲೂಕು ಕಛೇರಿಗೆ ಬರುವಂತಾಗಬೇಕು ಎಂದರು. ಈ ವೇಳೆ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ ಶ್ಯಾಮರಾಯ ಆಚಾರ್ ಅವರ ಮಗ ಸತೀಶ್, ಹಿರಿಯ ಮಗಳು ಸತ್ಯದೇವಿ ಹಾಗೂ ಅಳಿಯ ಸುರೇಶ್, ಮೊಮ್ಮಗ, ಪತ್ರಕರ್ತ ಮೌನೇಶ ವಿಶ್ವಕರ್ಮ ಉಪಸ್ಥಿತರಿದ್ದರು.