ಉಜಿರೆ: ಜೈನ ಧರ್ಮದ ರಕ್ಷಣೆ, ಅನುಷ್ಠಾನ ಮತ್ತು ಪ್ರಚಾರ ಜೈನ್‌ ಮಿಲನ್ ಗುರಿಯಾಗಬೇಕು. ಧರ್ಮದ ಪ್ರಚಾರ ಮನೆಯಿಂದಲೇ ಪ್ರಾರಂಭವಾಗಬೇಕು. ಜೈನ್‌ ಮಿಲನ್‌ಗಳು ಮುನಿಗಳ ಸೇವೆಗೂ ಆದ್ಯತೆ ನೀಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಅವರು ಧರ್ಮಸ್ಥಳದಲ್ಲಿ ಭಾರತೀಯ ಜೈನ್ ಮಿಲನ್ ಮಂಗಳೂರು ವಲಯದ ಪದಾಧಿಕಾರಿಗಳ ಸಭೆಯಲ್ಲಿ ಮಾರ್ಗದರ್ಶನ ನೀಡಿದರು.
ಜನರಲ್ಲಿ ಅಂತಸ್ತಿನ ಬೇಧ ಭಾವ ಇರಬಾರದು. ಜಿನ ಭಜನೆಯಿಂದ ಸಮಾನತೆ ಸಾಧಿಸಬಹುದು. ಆಧುನಿಕತೆಯ ಪ್ರವಾಹದಲ್ಲಿದ್ದರೂ ಜೈನರು ಧರ್ಮದ ಅನುಷ್ಠಾನದಿಂದ ತಮ್ಮ ವ್ಯಕ್ತಿತ್ವ ಉಳಿಸಿಕೊಳ್ಳಬೇಕು. ವಿಶೇಷ ದಿನಗಳಲ್ಲಿ ಕುಟುಂಬ ಸಮೇತರಾಗಿ ಅನಾಥಾಶ್ರಮ, ಆಸ್ಪತ್ರೆಗಳಿಗೆ ಭೇಟಿ ನೀಡುವ ಪರಿಪಾಠ ಬೆಳೆಸಿಕೊಳ್ಳಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮಾಜಕ್ಕೆ ಒದಗಿಸುವ ಕೆಲಸವನ್ನು ಜೈನ್ ಮಿಲನ್ ಶಾಖೆಗಳು ಮಾಡಬೇಕು ಎಂದು ಹೆಗ್ಗಡೆ ಅವರು ಸಲಹೆ ನೀಡಿದರು.


ಹೇಮಾವತಿ ವಿ. ಹೆಗ್ಗಡೆ ಅವರು ಮಾತನಾಡಿ, ಪ್ರತಿಕೂಲ ಪರಿಸ್ಥಿತಿಯಲ್ಲಿ ಸಮಾಜವನ್ನು ಮುನ್ನಡೆಸುವವನೆ ಸಮರ್ಥ ನಾಯಕ. ವ್ಯವಹಾರಗಳನ್ನು ಮಕ್ಕಳಿಗೆ ಹಸ್ತಾಂತರಿಸಿದಂತೆ, ಧರ್ಮವನ್ನು ಸಹಜ ಸ್ಥಿತಿಯಲ್ಲಿ ಮುಂದಿನ ಪೀಳಿಗೆಗೆ ಕೊಡುವ ಜವಾಬ್ದಾರಿ ನಮಗಿದೆ ಎಂದು ಹೇಳಿದರು. ದಾನ-ಧರ್ಮಾದಿ ಸತ್ಕಾರ್ಯಗಳನ್ನು ಮಾಡುವುದರೊಂದಿಗೆ ಶ್ರದ್ಧಾ ಕೇಂದ್ರಗಳ ಸ್ವಚ್ಛತೆಗೆ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.
ಹೆಗ್ಗಡೆ ದಂಪತಿಯನ್ನು ಗೌರವಿಸಲಾಯಿತು. ಪೂರನ್‌ವರ್ಮ ರೂಪಿಸಿದ ಜೈನ್ ಮಿಲನ್ ವೆಬ್‌ಸೈಟ್ ಬಿಡುಗಡೆಗೊಳಿಸಲಾಯಿತು.
ಉಜಿರೆಯ ಡಾ. ಬಿ. ಯಶೋವರ್ಮ, ಮಂಗಳೂರು ವಲಯದ ಅಧ್ಯಕ್ಷ ಪುಷ್ಪರಾಜ ಜೈನ್ ಮತ್ತು ಡಿ. ಹರ್ಷೇಂದ್ರ ಕುಮಾರ್‌ ಜೈನ್ ಮಿಲನ್ ಸಂಘಟನೆ ಬಗ್ಗೆ ಮಾರ್ಗದರ್ಶನ ನೀಡಿದರು.
ಎ.ವಿ. ಶೆಟ್ಟಿ, ಬಿ. ಸೋಮಶೇಖರ ಶೆಟ್ಟಿ ಮತ್ತು ಎಂ.ರಾಜೇಶ್‌ ಜೈನ್ ಸಭೆಯನ್ನು ಆಯೋಜಿಸುವಲ್ಲಿ ಸಹಕರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here