Saturday, April 6, 2024

ಧರ್ಮಸ್ಥಳದ ಸೇವಾ ಕಾರ್ಯಗಳಿಂದ ಸರ್ಕಾರಕ್ಕೆ ಪ್ರೇರಣೆ ಸೈನಿಕರು ದೇಶದ ರಕ್ಷಣೆ ಮಾಡಿದಂತೆ ನಾವು ಸಮಾಜದ ರಕ್ಷಣೆ ಮಾಡಬೇಕು- ಡಿ.ವಿ. ಸದಾನಂದಗೌಡ

ಉಜಿರೆ: ಸ್ವಾತಂತ್ರ್ಯಆಂದೋಲನದ ರೀತಿಯಲ್ಲಿ ಸ್ವಚ್ಛತಾ ಅಭಿಯಾನ ಆಂದೋಲನವಾಗಿ ಸ್ವಚ್ಛ ಭಾರತದ ಕನಸು ನನಸಾಗಬೇಕು. ಸೈನಿಕರು ದೇಶದ ರಕ್ಷಣೆ ಮಾಡಿದಂತೆ ನಾವು ಸಮಾಜದ ರಕ್ಷಣೆ ಮಾಡೋಣ ಎಂದು ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.
ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಆಡಳಿತ ಕಚೇರಿ ಧರ್ಮಶ್ರೀಯ ನೂತನ ವಿಸ್ತೃತ ಕಟ್ಟಡವನ್ನು ಶುಕ್ರವಾರ ಅವರು ಉದ್ಘಾಟಿಸಿ ಮಾತನಾಡಿದರು.


ಕೇವಲ ರಸ್ತೆ, ಆಸ್ಪತ್ರೆ, ಶಾಲೆ ಅಭಿವೃದ್ಧಿ ಆದರೆ ಅದು ಪ್ರಗತಿಯ ದ್ಯೋತಕವಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಸ್ವ-ಸಾಮರ್ಥ್ಯದಿಂದ, ಸರ್ಕಾರದ ಹಂಗಿಲ್ಲದೆ ಸಮಾಜದ ಸತ್ವಯುತ ಶಕ್ತಿಯಾಗಿ ಬೆಳೆದರೆ ಅದು ನಿಜವಾದ ಪ್ರಗತಿಯಾಗಿದೆ. ಸಮಾಜದ ಅಭಿವೃದ್ಧಿಯ ಮೂಲಮಂತ್ರವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅದ್ಭುತ ಯೋಜನೆಯಾಗಿದ್ದು, ಸರ್ಕಾರ ಕೂಡಾ ಹೆಗ್ಗಡೆಯವರಿಂದ ಮಾರ್ಗದರ್ಶನ, ಪ್ರೇರಣೆ ಪಡೆಯುತ್ತದೆ ಎಂದು ಅವರು ಹೇಳಿದರು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಬಲೀಕರಣದೊಂದಿಗೆ ಗ್ರಾಮೀಣ ಪ್ರದೇಶದ ಸರ್ವತೋಮುಖ ಪ್ರಗತಿಯೊಂದಿಗೆ ಸಾಮಾಜಿಕ ಸಾಮರಸ್ಯದ ಜೀವನಕ್ಕೆ ಪ್ರೇರಕ ಶಕ್ತಿಯಾಗಿದೆ. ಧರ್ಮಸ್ಥಳ ಧಾರ್ಮಿಕ ಶ್ರದ್ಧಾ ಕೇಂದ್ರ ಮಾತ್ರವಲ್ಲ, ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯೊಂದಿಗೆ ಪ್ರತಿಯೊಬ್ಬ ವ್ಯಕ್ತಿಯ ಉಜ್ವಲ ಭವಿಷ್ಯವನ್ನು ರೂಪಿಸುವ ಕೇಂದ್ರವಾಗಿದೆ ಎಂದು ಅವರು ಹೇಳಿದರು.
ನೂತನ ಕಟ್ಟಡದ ವಿನ್ಯಾಸ ಮತ್ತು ವ್ಯವಸ್ಥೆಯನ್ನು ಶ್ಲಾಘಿಸಿದ ಅವರು ಆಧುನಿಕ ತಂತ್ರಜ್ಞಾನ ಬಳಕೆಯಿಂದ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಾಗುತ್ತದೆ. ಮಾನವೀಯ ಸಂಬಂಧವೂ ಬೆಳೆಯುತ್ತದೆ ಎಂದರು.


ತ್ಯಾಜ್ಯ ಸಂಗ್ರಹಣಾ ಬುಟ್ಟಿಗಳನ್ನು ವಿತರಿಸಿದ ಮುಜರಾಯಿ ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸರ್ಕಾರದ ಜನಮಂಗಳ ಕಾರ್ಯಗಳಿಗೆ ಹೆಗ್ಗಡೆಯವರೇ ಪ್ರೇರಕ ಶಕ್ತಿಯಾಗಿದ್ದಾರೆ. ಧರ್ಮಸ್ಥಳದ ಮಾದರಿಯಲ್ಲೆ ಏಪ್ರಿಲ್ 26ರಂದು ರಾಜ್ಯದ 110 ದೇವಸ್ಥಾನಗಳಲ್ಲಿ ಸರ್ಕಾರದ ವತಿಯಿಂದ ಸಾಮೂಹಿಕ ವಿವಾಹ ನಡೆಸಲಾಗುವುದು. ಯಾವುದಾದರೂ ಒಂದು ದೇವಸ್ಥಾನದ ಸಾಮೂಹಿಕ ವಿವಾಹಕ್ಕೆ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಬಂದು ಆಶೀರ್ವದಿಸಬೇಕು ಎಂದು ಸಚಿವರು ಅವರನ್ನು ಆಮಂತ್ರಿಸಿದರು.


ಎಲ್ಲಾ ದೇವಸ್ಥಾನಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದರೊಂದಿಗೆ, ಸುಂದರವಾಗಿದ್ದು ಭಕ್ತರನ್ನು ಆಕರ್ಷಿಸುವ ಕೇಂದ್ರಗಳಾಗಬೇಕು ಎಂದು ಅವರು ಸಲಹೆ ನೀಡಿದರು.

ಜಲಾಭಿಷೇಕಯೋಜನೆ: ನೂತನ ಜಲಾಭಿಷೇಕ ಯೋಜನೆಯಡಿ ರಾಜ್ಯದಲ್ಲಿ ದೇವಸ್ಥಾನಗಳ ಬಳಿ ಇರುವ ಕೆರೆಗಳನ್ನು (ಪುಷ್ಕರಣಿ) ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಶುಚೀಕರಣಗೊಳಿಸಲಾಗುವದು ಎಂದು ಸಚಿವರು ಪ್ರಕಟಿಸಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ರಾಜ್ಯದೆಲ್ಲೆಡೆ 1500 ಮಂದಿ ಸೇವಾ ಪ್ರತಿನಿಧಿಗಳು ಸೇವೆ ಮಾಡಿ ಯೋಜನೆಯನ್ನು ಯಶಸ್ವಿಗೊಳಿಸಿದ್ದಾರೆ. ಜನರ ವ್ಯಕ್ತಿತ್ವದಲ್ಲಿ, ಜೀವನ ಶೈಲಿಯಲ್ಲಿ ಸುಧಾರಣೆಯಾಗಿ ಸಾಮಾಜಿಕ ಪರಿವರ್ತನೆಯಾಗಿದೆ. ದುಶ್ಚಟಗಳು ದೂರವಾಗಿವೆ. ಶುಚಿತ್ವದ ಕಲ್ಪನೆ ಸಾರ್ವತ್ರಿಕವಾಗಿ ಮೂಡಿ ಬಂದಿದೆ. ಫಲಾನುಭವಿಗಳೆಲ್ಲ ಪ್ರಗತಿಯ ಹರಿಕಾರರಾಗಿ ಯೋಜನೆಯ ಯಶಸ್ಸಿನ ಪಾಲುದಾರರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಜನಮಂಗಳ ಕಾರ್ಯಕ್ರಮದಡಿಯಲ್ಲಿ ವಿಶೇಷ ಚೇತನರಿಗೆ ಶಾಸಕ ಹರೀಶ್ ಪೂಂಜ ಸಲಕರಣೆಗಳನ್ನು ವಿತರಿಸಿ, ಮಾತನಾಡಿ, ಭಜನಾ ಮಂದಿರಗಳಲ್ಲಿ ಮೂಲ ದಾಖಲೆಗಳು ಇಲ್ಲದ ಕಾರಣ ಅಡಚಣೆಯಾಗುತ್ತಿದೆ.ಈ ದಿಸೆಯಲ್ಲಿ ಸಚಿವರು ಸೂಕ್ತ ಸಹಕಾರ ನೀಡಬೇಕು ಎಂದು ಕೋರಿದರು.
ಆಶಯ ಭಾಷಣ ಮಾಡಿದ ಹೇಮಾವತಿ ವೀ. ಹೆಗ್ಗಡೆಯವರು, ಸಾರ್ವಜನಿಕರು ಸಂವೇದನಾಶೀಲರಾಗಿ, ಆಯಾ ಊರಿನ ದೇವಸ್ಥಾನಗಳು, ನದಿಗಳು ಹಾಗೂ ಕೆರೆಗಳನ್ನು ಸ್ವಚ್ಛವಾಗಿರಿಸುವ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಶುದ್ಧ ಗಾಳಿ, ನೀರು ಮತ್ತು ಸ್ವಚ್ಛ ಪರಿಸರ ನಮ್ಮಆರೋಗ್ಯ ರಕ್ಷಣೆಗೆ ಅತಿ ಅಗತ್ಯ ಎಂದು ಹೇಳಿದರು.


ಧರ್ಮಸ್ಥಳ ವಲಯದ 9 ಒಕ್ಕೂಟಗಳ ಪದಗ್ರಹಣ ಸಮಾರಂಭ ನಡೆಯಿತು.
ಕಟ್ಟಡ ನಿರ್ಮಾಣದ ರೂವಾರಿ ಡಿ. ಹರ್ಷೇಂದ್ರಕುಮಾರ್, ವಾಸ್ತು ಶಿಲ್ಪಿ ಬ್ರಹ್ಮೆ ಮತ್ತು ಗೋಪಾಲ ಮೆನನ್‌ ಅವರನ್ನುಗೌರವಿಸಲಾಯಿತು.
ಡಾ. ಎಲ್.ಎಚ್.ಮಂಜುನಾಥ್ ಸ್ವಾಗತಿಸಿದರು.ಯೋಜನಾಧಿಕಾರಿ ಜಯಕರ ಶೆಟ್ಟಿ ವಂದಿಸಿದರು. ಪ್ರಾದೇಶಿಕ ನಿರ್ದೇಶಕ ಶ್ರೀಹರಿ ಮತ್ತು ಮಮತಾ ರಾವ್‌ ಕಾರ್ಯಕ್ರಮ ನಿರೂಪಿಸಿದರು.

ಮುಖ್ಯಾಂಶಗಳು:

1.ಹತ್ತು ಸಾವಿರ ಶ್ರದ್ಧಾ ಕೇಂದ್ರಗಳಿಗೆ ತಲಾ ಎರಡರಂತೆ ಇಪ್ಪತ್ತು ಸಾವಿರ ತ್ಯಾಜ್ಯ ಸಂಗ್ರಹಣಾ ಬುಟ್ಟಿಗಳನ್ನು ವಿತರಿಸಲಾಯಿತು.
2.ರಾಷ್ಟ್ರೀಯ ರಕ್ಷಣಾ ನಿಧಿಗೆ 20 ಲಕ್ಷರೂ. ದೇಣಿಗೆಯನ್ನು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರ ಮೂಲಕ ನೀಡಲಾಯಿತು.
3.ಜನಮಂಗಳ ಕಾರ್ಯಕ್ರಮದಡಿ 1,415 ಮಂದಿ ವಿಶೇಷ ಚೇತನರಿಗೆ ಸಲಕರಣೆಗಳನ್ನು ವಿತರಿಸಲಾಯಿತು.
4.ಧರ್ಮಸ್ಥಳ ವಲಯದ 9 ಒಕ್ಕೂಟಗಳ ಪದಗ್ರಹಣ ಸಮಾರಂಭ ನಡೆಯಿತು.

More from the blog

ನೀತಿ ಸಂಹಿತೆ ಉಲ್ಲಂಘನೆ : ಕೋಟಾ ಶ್ರೀನಿವಾಸ್‌ ಪೂಜಾರಿಗೆ ಕೋರ್ಟ್‌ ಸಮನ್ಸ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ...

ಬೆಳ್ತಂಗಡಿ: ಆನ್ ಲೈನ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ವಂಚನೆ : ದೂರು ದಾಖಲು

ಬೆಳ್ತಂಗಡಿ: ಮಹಿಳೆಯೊಬ್ಬರಿಗೆ ಫೇಸ್‌ಬುಕ್‌ ಆಪ್‌ ಮೂಲಕ ಸಾಲ ನೀಡುವುದಾಗಿ ಅಪರಿಚಿತರರು ನಂಬಿಸಿ ವಂಚನೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದಲ್ಲಿ ನಡೆದಿದೆ. ವಂಚನೆಗೊಳಗಾದ ಮಹಿಳೆ ನೆಬಿಸಾ ಅವರು ಈ ಬಗ್ಗೆ ವೇಣೂರು ಪೋಲಿಸ್‌...

ಸಾವು ಗೆದ್ದು ಬಂದ ಸಾತ್ವಿಕ್ ; ಸತತ 20 ಗಂಟೆಗಳ ಕಾರ್ಯಾಚರಣೆ ಯಶಸ್ವಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಕಂದ ಸಾತ್ವಿಕ್​​ನನ್ನು ಕೊನೆಗೂ ರಕ್ಷಣಾ ಪಡೆಯ ಸಿಬ್ಬಂದಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂಡಿಯ ಲಚ್ಯಾನ ಗ್ರಾಮದ ತೋಟದಲ್ಲಿ ಆಟವಾಡುತ್ತಿದ್ದಾಗ ಮಗು ಕೊಳವೆ ಬಾವಿಗೆ ಬಿದ್ದಿತ್ತು. ಈ ಸಂಬಂಧ...

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...