ಉಜಿರೆ: ತಾವು ಮಾಡುವ ಕೆಲಸವನ್ನು ಚಾಚೂ ತಪ್ಪದೆ ಮಾಡುವುದೇ ನಿಜವಾದ ತಪಸ್ಸು. ಇತ್ತೀಚೆಗೆ ಪರಂಧಾಮವನ್ನು ಹೊಂದಿದ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ರಾಮಕೃಷ್ಣ ಮತ್ತು ವಿಠಲನ ಪೂಜೆಯೊಂದಿಗೆ ಜಪ, ತಪ, ಧ್ಯಾನದಲ್ಲಿ ನಿರತರಾಗಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಅನುಷ್ಠಾನಗೊಳಿಸಿ ರಾಷ್ಟ್ರ ಸಂತರಾದರು.ಸರ್ವ ಧರ್ಮೀಯರಿಗೂ ಅವರು ಆದರ್ಶ ಗುರುಗಳಾಗಿದ್ದರು ಎಂದು ಸ್ವಾಮೀಜಿಯವರ ಶಿಷ್ಯ ಶಶಾಂಕ್ ಭಟ್ ಹೇಳಿದರು.
ಗುರುವಾಯನಕೆರೆಯಲ್ಲಿ ನಮ್ಮ ಮನೆ ಹವ್ಯಕ ಭವನದಲ್ಲಿ ಸೋಮವಾರ ಅವರು ಇತ್ತೀಚೆಗೆ ಪರಂಧಾಮವನ್ನು ಹೊಂದಿದ ಪೂಜ್ಯ ಶ್ರೀಗಳಿಗೆ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿರುವ ಪೂಜ್ಯರ ವಿದ್ಯಾಪೀಠದಲ್ಲಿ ತಾನು 13 ವರ್ಷ ಅಧ್ಯಯನ ಮಾಡಿದ್ದು, ಬಳಿಕ ಮೂರು ವರ್ಷ ಪೂಜ್ಯರ ಶಿಷ್ಯನಾಗಿ ಸೇವೆ ಸಲ್ಲಿಸುವ ಅವಕಾಶ ದೊರಕಿತ್ತು.
ಉಡುಪಿಯಲ್ಲಿ ಸ್ವಾಮೀಜಿ ಪ್ರಾರಂಭಿಸಿದ ದುಶ್ಚಟ ನಿವಾರಣಾ ಹುಂಡಿ ಬಗ್ಗೆ ಮಾಹಿತಿ ನೀಡಿದ ಅವರು 23 ಮಂದಿ ಮುಸಲ್ಮಾನರು ಗೋ ಮಾಂಸ ತಿನ್ನುವುದಿಲ್ಲ ಎಂದು ಸಂಕಲ್ಪ ಮಾಡಿ ಬರೆದ ಪತ್ರ ಹುಂಡಿಯಲ್ಲಿ ಲಭಿಸಿರುವುದಾಗಿ ಅವರು ತಿಳಿಸಿದರು.
ತಮ್ಮ ವಿರುದ್ಧವಾಗಿ ಕಟು ಟೀಕೆ ಮಾಡಿದ ಪತ್ರಕರ್ತ ಲಂಕೇಶ್ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಗ ಅವರನ್ನು ಭೇಟಿಯಾಗಿ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿ ಪೇಜಾವರ ಸ್ವಾಮೀಜಿ ವಿರೋಧಿಗಳಲ್ಲಿಯೂ ಹೃದಯ ಶ್ರೀಮಂತಿಕೆ ಹೊಂದಿದ್ದರು ಎಂದು ಹೇಳಿದರು.
ರಾಮ ಜನ್ಮತೀರ್ಪು ಪ್ರಕಟವಾದ ಸಂತೋಷದಲ್ಲಿ ಆ ದಿನ ಸ್ವಾಮೀಜಿ ಉಪವಾಸ ವ್ರತ ಮಾಡಿದರು. ಅಪಾರ ದೈವೀಶಕ್ತಿ ಮತ್ತು ಶಿಷ್ಯ ಪ್ರೇಮ ಹೊಂದಿದ ಸ್ವಾಮೀಜಿಗೆ ನಿರಂತರ ಪ್ರಯಾಣವೇ ಮುಳುವಾಯಿತು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಶಶಾಂಕ್ ಭಟ್ ಹೇಳಿದರು.
ಪೂಜ್ಯ ಸ್ವಾಮೀಜಿಯವರಿಗೆ ಸಾಮೂಹಿಕ ಮೌನ ಪ್ರಾರ್ಥನೆಯೊಂದಿಗೆ ಗೌರವ ಸಲ್ಲಿಸಲಾಯಿತು.