ಉಜಿರೆ: ವಾರ್ತಾ ಪತ್ರಿಕೆಗಳು ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಸಂಪರ್ಕ ಕೊಂಡಿಯಾಗಿದ್ದು, ಸಾರ್ವಜನಿಕ ಅಭಿಪ್ರಾಯ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪತ್ರಿಕೆಗಳು ಓದುಗರ ಆಸಕ್ತಿಯನ್ನು ಅರಳಿಸಬೇಕು, ಕೆರಳಿಸಬಾರದು ಎಂದು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಯನ್. ಪೂವಣಿ ಹೇಳಿದರು.
ಅವರು ಶನಿವಾರ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಘಟಕದ ಆಶ್ರಯದಲ್ಲಿ ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ ‘ಸಮಾಜ ಸುಧಾರಣೆಯಲ್ಲಿ ಮಾಧ್ಯಮಗಳ ಪಾತ್ರ’ ಎಂಬ ವಿಷಯದ ಬಗ್ಗೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸುದ್ದಿಯಲ್ಲಿ ನಿಖರತೆ ಇದ್ದು, ಸುದ್ದಿಯ ವೈಭವೀಕರಣ ಸಲ್ಲದು. ಆರೋಗ್ಯ ಪೂರ್ಣ ಸಮಾಜ ರೂಪಿಸುವುದೇ ಪತ್ರಿಕೆಗಳ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಎಲ್ಲರೂ ಪತ್ರಿಕೆಯನ್ನು ಕೊಂಡು ಓದಬೇಕು, ಕೊಂಡಾಡಬೇಕು ಎಂದು ಅವರು ಸಲಹೆ ನೀಡಿದರು.
ಶುಭಾಶಂಸನೆ ಮಾಡಿದ ಬೆಳ್ತಂಗಡಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್ ಮಾತನಾಡಿ, ನಗರ ಪಂಚಾಯತ್ ವತಿಯಿಂದ ಪ್ರತಿ ದಿನ ಬೆಳಿಗ್ಗೆ ಗಂಟೆ 7.30 ರಿಂದ 8.30 ರ ವರೆಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ವಚ್ಛತೆ ಕಾಪಾಡಲು ಎಲ್ಲರೂ ಸಹಕರಿಸಬೇಕೆಂದು ಅವರು ಕೋರಿದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಎಚ್.ಪದ್ಮಕುಮಾರ್ ಸ್ವಾಗತಿಸಿದರು. ನಿವೃತ್ತ ಶಿಕ್ಷಕಿ ಧನಲಕ್ಷ್ಮೀ ಧನ್ಯವಾದವಿತ್ತರು. ಬಳಿಕ ಸಂಘದ ಕಾರ್ಯಾಕಾರಿ ಸಮಿತಿ ಸಮಾಲೋಚನಾ ಸಭೆ ನಡೆಸಲಾಯಿತು.