ಉಜಿರೆ: ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿದಾಗ ಸ್ವಚ್ಛ ಪರಿಸರ ನಿರ್ಮಾಣವಾಗುತ್ತದೆ. ಕಸ ಸೃಷ್ಟಿ ಮಾಡುವುದು ಮತ್ತು ಬಿಸಾಡುವುದು ನಮ್ಮ ಸಂಸ್ಕೃತಿ ಅಲ್ಲ. ಸುಂದರ ಪರಿಸರದೊಂದಿಗೆ ಸುಂದರ ಹಾಗೂ ನೆಮ್ಮದಿಯ ಬದುಕು ಸಾಧ್ಯ ಎಂದು ಧರ್ಮಸ್ಥಳದ ಶ್ರದ್ಧಾ ಅಮಿತ್ ಹೇಳಿದರು.
ಉಜಿರೆ ಎಸ್.ಡಿ.ಎಂ.ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅವರು, ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ ಸ್ವಚ್ಛತಾ ಅಭಿಯಾನದಲ್ಲಿ ಹಳೆ ಬಟ್ಟೆಗಳಿಂದ ತಯಾರಿಸಿದ ಚೀಲಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ನದಿ ನೀರನ್ನು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಕಲುಷಿತಗೊಳಿಸದಂತೆ ಹಿರಿಯರು ಮಕ್ಕಳಲ್ಲಿ ಅರಿವು, ಜಾಗೃತಿ ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು.
ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಮಾತನಾಡಿ, ಭವಿಷ್ಯದಲ್ಲಿ ನಾವು ತಾಂತ್ರಿಕ ಬೆಳವಣಿಗೆ,ಜಾಗತೀಕರಣ ಮತ್ತು ಪರಿಸರ ಮಾಲಿನ್ಯ ಎಂಬ ದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಸ್ವಚ್ಛ ಪರಿಸರದೊಂದಿಗೆ ಪ್ಲಾಸ್ಟಿಕ್ ಬಳಕೆ ರಹಿತ ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳನ್ನು ರೂಪಿಸಲಾಗುವುದು. ಈಗಾಗಲೇ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಯಶಸ್ವಿ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು.
ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್. ಜನಾರ್ದನ್ ಮಾತನಾಡಿ, ಪರಿಸರವನ್ನು ಪ್ರೀತಿಸಿ, ಉತ್ತಮ ವಾತಾವರಣ ರೂಪಿಸಲು ಎಲ್ಲರೂ ಪಣ ತೊಡಬೇಕು ಎಂದು ಸಲಹೆ ನೀಡಿದರು.
ಧರ್ಮಸ್ಥಳದ ಕು. ಮಾನ್ಯ, ಎಸ್.ಡಿ.ಎಂ.ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್. ಸತೀಶ್ಚಂದ್ರ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್. ದಿನೇಶ್ ಚೌಟ ಉಪಸ್ಥಿತರಿದ್ದರು.