ಬಂಟ್ವಾಳ : ತಾಲೂಕಿನ ಗ್ರಾ.ಪಂ.ಗಳಿಗೆ ೯/೧೧ ಸೇರಿದಂತೆ ಇತರ ಸೌಲಭ್ಯಕ್ಕಾಗಿ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳನ್ನು ವಿಳಂಬವಾಗುತ್ತಿರುವ ಕುರಿತು ತಾ.ಪಂ.ಸದಸ್ಯರ ದೂರಿನ ಹಿನ್ನೆಲೆಯಲ್ಲಿ, ನಿರ್ದಿಷ್ಟ ದಿನದೊಳಗೆ ವಿಲೇವಾರಿ ಮಾಡಲು ಗ್ರಾ.ಪಂ.ಅಭಿವೃದ್ಧಿ ಅಽಕಾರಿಗಳಿಗೂ ನೋಟಿಸ್ ನೀಡುವುದಾಗಿ ಬಂಟ್ವಾಳ ತಾ.ಪಂ.ಕಾರ್ಯನಿರ್ವಹಣಾಽಕಾರಿ ರಾಜಣ್ಣ ಅವರು ತಿಳಿಸಿದರು.
ಬಂಟ್ವಾಳ ತಾ.ಪಂ.ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಸದಸ್ಯರ ದೂರಿಗೆ ಪ್ರತಿಕ್ರಿಯಿಸಿದರು.
ಸದಸ್ಯ ಪ್ರಭಾಕರ ಪ್ರಭು ಅವರು, ೯/೧೧ ಅರ್ಜಿಗಳ ವಿಲೇವಾರಿಗೆ ಗ್ರಾ.ಪಂ.ಪಿಡಿಒಗಳು ವಿಳಂಬ ಮಾಡುತ್ತಿದ್ದಾರೆ ಹಾಗೂ ಗ್ರಾ.ಪಂ.ಗಳಲ್ಲಿ ಕೇಂದ್ರ ಸರಕಾರದ ಅನುದಾನ ಬಾಕಿ ಉಳಿಯುತ್ತಿರುವ ಕುರಿತು ಸಭೆಯ ಗಮನಕ್ಕೆ ತಂದರು. ಈ ಕುರಿತು ಈಗಾಗಲೇ ಪಿಡಿಒಗಳಿಗೆ ತಿಳಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು. ನೋಟಿಸ್ ನೀಡುವ ಕುರಿತು ಇಒ ವಿವರಿಸಿದರು.
ಮೆಸ್ಕಾಂ ಇಲಾಖೆಗೆ ಟಿಸಿಗಾಗಿ ಬೇಡಿಕೆ ಸಲ್ಲಿಸಿದರೆ ಸ್ಪಂದನೆ ಇಲ್ಲ ಎಂದು ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಅವರು ಆರೋಪಕ್ಕೆ ಸದಸ್ಯ ಪ್ರಭಾಕರ ಪ್ರಭು ಅವರು ಧ್ವನಿಗೂಡಿಸಿದರು. ಗ್ರಾಮ ಮಟ್ಟದಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳ ತೆರವಿನ ಕುರಿತು ಸದಸ್ಯ ಉಸ್ಮಾನ್ ಕರೋಪಾಡಿ ಅವರು ವಿಷಯ ಪ್ರಸ್ತಾಪಿಸಿದಾಗ, ಈಗಾಗಲೇ ೧೫ ದಿನಕ್ಕೆ ತಾಲೂಕಿಗೆ ಆಧಾರ್ ಕಿಟ್ ನೀಡಿದ್ದರು ಎಂದು ತಹಶೀಲ್ದಾರ್ ರಶ್ಮಿ ಎಸ್.ಆರ್.ತಿಳಿಸಿದರು. ಸಜೀಪಮೂಡ ಕೊಲ್ಯ ಅಂಗನವಾಡಿ ಕೇಂದ್ರದ ನಿವೇಶನದ ಕುರಿತು ಸದಸ್ಯ ಸಂಜೀವ ಪೂಜಾರಿ ಅವರು ಪ್ರಶ್ನಿಸಿದರು.
ಬಡಗಬೆಳ್ಳೂರಿನಲ್ಲಿ ತಾ.ಪಂ.ನ ನಿವೇಶನ ಮೀಸಲು ಭೂಮಿಯ ಆರ್‌ಟಿಸಿಯ ಸಮಸ್ಯೆಯ ಕುರಿತು ಗ್ರಾ.ಪಂ.ಅಧ್ಯಕ್ಷೆ ಜಯಂತಿ ತಿಳಿಸಿದ್ದು, ಅದನ್ನು ರದ್ದು ಮಾಡಿ ೯೪ಸಿಯಲ್ಲಿ ಅವಕಾಶ ಕಲ್ಪಿಸುವ ಕುರಿತು ಚರ್ಚೆ ನಡೆಯಿತು.
ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಉಪಸ್ಥಿತರಿದ್ದರು.