ಬಂಟ್ವಾಳ: ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ಸಾಂಸ್ಕೃತಿಕ ಸಂಘ, ರೋವರ್ ರೇಂಜರ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಜಂಟಿ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ಸಪ್ತಾದ ಕಾರ್ಯಕ್ರಮ ಜರಗಿತು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ರತ್ನಕುಮಾರ್ ಚೌಟ ಅವರು ಕಾರ್ಯಕ್ರಮ ಉದ್ಘಾಟಿಸಿ, ಯುವ ಸಮುದಾಯ ವಿವೇಕಾನಂದರ ಚಿಂತನೆಗಳಂತೆ ಆದರ್ಶಪ್ರಾಯವಾಗಿರಬೇಕು ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಳ್ವಾಸ್ ಕಾಲೇಜು ಮೂಡಬಿದ್ರೆಯ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಜ್ಯೋತಿ ರೈ, ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ವಿವೇಕಾನಂದರ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ವಿವೇಕಾನಂದರ ಜೀವನದ ಹಲವು ಘಟನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸುವುದರ ಮೂಲಕ ಬಲಿಷ್ಠ ಭಾರತದಲ್ಲಿ ಯುವಕರ ಪಾತ್ರವನ್ನು ನೆನಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಹೆಚ್.ಕೆ. ಅವರು ಯುವ ಸಮುದಾಯವು ತಮ್ಮ ಕರ್ತವ್ಯವನ್ನರಿತು ಶ್ರಮ ವಹಿಸಿದಾಗ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ನಸೀಮಾ ಬೇಗಂ ಎಸ್. ಕಾರ್ಯಕ್ರಮವನ್ನು ಸಂಯೋಜಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕವಿತಾ ಸ್ವಾಗತಿಸಿ, ರೋಶನ್ ವಂದಿಸಿದರು. ನಿಶ್ವಿತಾ ಕಾರ್ಯಕ್ರಮ ನಿರೂಪಿಸಿದರು.