ಭರವಸೆಯ ಬೆಳಕನ್ನು
ಬದುಕಿನಲಿ ತೀಡಿ
ಎಂಟು ವರುಷಗಳ ನಂತರ
ಮಡಿಲಲಿ ಆಡಿ!
ಅಪ್ಪ- ಅಮ್ಮ ಬಿರುದನು
ನಮಗೆ ನೀಡಿ
ನಕ್ಕು ನಲಿದಳು ಮಗಳು
ತೊದಲು ಹಾಡಿ!

ಪುಟ್ಟ ಕಂಗಳ ಚೆಲುವೆ
ಅತ್ತಿತ್ತ ಕಾಲಾಡಿಸಿ
ಕನಸು ತುಂಬಿದ ಕೇಕೆ
ಎಲ್ಲೆಡೆ ಅನುರಣಿಸಿ!
ಎಲ್ಲರನು ನಗೆಮಹಲಿನಲಿ
ಬಿಡದೆ ತೇಲಾಡಿಸಿ
ನಗುಮೊಗದಲಿ ಕನಸು
ವಳು ತಾ ಪವಡಿಸಿ!

ದಿನ ಕಳೆದ ಅರಿವಿಲ್ಲ
ಹಗಲಿರುಳ ಪರವೆಯಿಲ್ಲ
ನಕ್ಕಾಗ ಹಗಲು ಅತ್ತಾಗ
ಇರುಳು ತಾನಾಯಿತಲ್ಲ!
ಅಳು ತಾರಕ ನಗು ಮೋಹಕ
ವೇ ಸ್ವರತಾನವೆಲ್ಲ
ಆಡಲಿಳಿದರೆ ಕೈಲಿರುವುದು
ಓ ಬಾಯಿಗೇ ಎಲ್ಲ!

ತೊಡೆಯನಿಳಿದವಳೆ ನಡೆವಳು
ತಾ ರಾಣಿಯಂತೆ
ಮುಟ್ಟಿದರೆ ಬುಸುಗುಡುವಳು
ನಾಗಿಣಿಯಂತೆ!
ಕುಲುಕುಲು ನಗೆಯ ಚೆಲ್ಲುವಳು
ಅರಗಿಣಿಯಂತೆ
ಹಾಲುಗಲ್ಲದ ತುಂಬ ಖುಷಿ
ನಾದತರಂಗಿಣಿಯಂತೆ!

ಬೆಳೆದ ಮಗಳು ಬೆದರಿಕೆಗೆ
ಹಾಕಬೇಕೇ ಸೊಪ್ಪು?
ಅಡಿಗೆಗೆ ಈಗ ‘ತಾನೆ
ಹಾಕುವಳು’ ಖಾರ ಉಪ್ಪು!
ಬೇಡವೆಂದರೂ ಬಿಡದು
ಈಗ ನಮಗೆ ಮುಪ್ಪು
ನಿಜ,ಅವಳೆ ನಿರ್ಧರಿಸುವಳೀಗ
ಎಲ್ಲ ತಪ್ಪು ಒಪ್ಪು!

ನೀ.ಶ್ರೀಶೈಲ ಹುಲ್ಲೂರು

 

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here