Thursday, October 26, 2023

ಅವಳ ನೆನಪಿನಿಂದ…

Must read

ಅಳತೆ

ಹುಚ್ಚನಾಗಿಬಿಟ್ಟೆ
ನಾನು ಹುಚ್ಚನಾಗಿಬಿಟ್ಟೆ
ನಿನ್ನ ಪ್ರೀತಿಯಲ್ಲಿ
ನಾ ಹುಚ್ಚನಾಗಿಬಿಟ್ಟೆ..!
ಅಳತೆಗೆ ಸಿಗದ ಪ್ರೀತಿಯ
ಅಳೆಯುವ ಹುಚ್ಚನಾಗಿಬಿಟ್ಟೆ

ಕದ್ದು ಮುಚ್ಚಿ ನಿನ್ನಂದವ
ನೋಡಿ ನೋಡಿ
ಎದೆಯೊಳಗೆ ಅಳತೆ ಮಾಡಿಬಿಟ್ಟೆ..
ಕೆನ್ನೆ, ತುಟಿ, ಕಣ್ಣು, ಹುಬ್ಬು, ಮುಂಗುರುಳು..,
ನಗು, ಅಳು, ಮಾತು, ಮೌನ..,
ಎಲ್ಲವೂ ಎದೆಯೊಳಗೆ
ಅಳತೆಗೆ ಇಟ್ಟು ಬಿಟ್ಟೆ..!

ಜೊತೆಯಾದ ಕ್ಷಣ,
ಮುತ್ತಿಟ್ಟ ಹೊತ್ತು,
ಬಿಸಿ ಅಪ್ಪುಗೆ,
ತೋಳಿನ ಹಿಡಿತ,
ಅಂಗೈಯ ಸ್ಪರ್ಶ,
ತೊಡೆಯಲ್ಲಿ ನಿದ್ದೆ,
ಎಲ್ಲವೂ ಎದೆಯೊಳಗೆ ಅಳತೆಗೆ ಇಟ್ಟು ಬಿಟ್ಟೆ.

ಎದೆಗೊಂದು ಅಳತೆ ಇದೆ
ನಾ ತೊಟ್ಟ ಬಟ್ಟೆಗೆ
ಪಾದಕ್ಕೆ ಅಂಟುವ ಚಪ್ಪಲಿಗೆ
ಮಲಗುವ ಮಂಚಕ್ಕೆ
ಜೀವಿಸಲು ಕಟ್ಟಿದ ಮನೆಗೆ
ತಿನ್ನೊ ಅನ್ನಕ್ಕೆ, ಕುಡಿಯೋ ನೀರಿಗೆ
ಅಷ್ಟೇ ಯಾಕೆ
ದೇಹ ಮಣ್ಣಾಗಿಸಲು
ತೆಗೆದ ಗುಂಡಿಗೂ ಅಳತೆ ಇದೆ..!

ಆದರೆ ಅಳತೆ ಇಲ್ಲ ನೋಡು
ಎದೆಯೊಳಗಿನ ಈ ಪ್ರೀತಿಗೆ..!
ಅದರೊಳಗಿನ ಉತ್ಸಾಹಕ್ಕೆ..!

ಯತೀಶ್ ಕಾಮಾಜೆ

More articles

Latest article