ಜಾತಿ ಸುಳಿಯ ಮೀರಿ
ನೀನು ಈಜಬಲ್ಲೆಯೇನು?
ಧರ್ಮ ಬಲೆಯ ಹರಿದು
ನೀನು ಹಾರಬಲ್ಲೆಯೇನು?
ಒಂದೆ ಕುಲ ಒಂದೆ
ಜಾತಿ ಒಂದೆ ಮತ!
ಎದೆ ತುಂಬಿ ಇದ
ಹಾಡಬಲ್ಲೆಯೇನು?

ಒಳಗಿನುರಿಯ ಮೆಟ್ಟಿ
ನೀನು ನಿಲ್ಲಬಲ್ಲೆಯೇನು?
ಬೆಂಕಿಯುಗುಳೊ ದೇಹ
ಗಳನು ಗೆಲ್ಲಬಲ್ಲೆಯೇನು?
ಸಹನೆ ಇಲ್ಲ ಕರುಣೆ ಇಲ್ಲ
ಇಲ್ಲ ಮಿಡಿತ ರಾಗ!
ರೋಷ ದ್ವೇಷ ಕ್ಲೇಶಭಾವ
ಕೊಲ್ಲಬಲ್ಲೆಯೇನು?

ತಂದೆ ತಾಯಿ ಮಾತು
ನೀತಿ ಕೇಳಬಲ್ಲೆಯೇನು?
ಬೇಕು ಶಾಂತಿ ಬೇಡ ಭ್ರಾಂತಿ
ತಿಳಿಯಬಲ್ಲೆಯೇನು?
ಬೆಂಕಿ ಇಟ್ಟೆ ಕೊಳ್ಳಿ ಇಟ್ಟೆ
ಸುಟ್ಟೆ ಪ್ರಾಣಗಳನು!
ಹಿಡಿದ ಹಾದಿ ಮಡಿಚಿ
ಇಟ್ಟು ಏಳಬಲ್ಲೆಯೇನು?

ಸುಟ್ಟು ಹೋದ ಬದುಕ
ಮತ್ತೆ ಕಟ್ಟಬಲ್ಲೆಯೇನು?
ಸಮರಸದ ತಾಯಿಬೇರು
ಕೀಳಬಲ್ಲೆಯೇನು?
ಹೇಡಿತನಕೆ ಹಿರಿಯ ನೀನು
ಕೇಡಿ ಬುದ್ಧಿ ಲಾಲಿಪೆ!
ಗಾಳಿ ನೀರು ನೆಲವ ಬಿಟ್ಟು
ಬಾಳಬಲ್ಲೆಯೇನು?

ನೀ.ಶ್ರೀಶೈಲ ಹುಲ್ಲೂರು

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here