Sunday, October 22, 2023

ಕರಾವಳಿಯ ಹರೇಕಳ ಹಾಜಬ್ಬ ಗೆ ಪದ್ಮಶ್ರೀ ಗೌರವ

Must read

ಮಂಗಳೂರು: ಗಣರಾಜ್ಯೋತ್ಸವ ಮುನ್ನ ದಿನ ಕೇಂದ್ರ ಸರ್ಕಾರ ಪ್ರಸಕ್ತ 2020ನೇ ಸಾಲಿನ ಪದ್ಮಶ್ರೀ, ಪದ್ಮವಿಭೂಷಣ, ಪದ್ಮಭೂಷಣ ಪ್ರಶಸ್ತಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಇತ್ತೀಚೆಗೆ ನಿಧನರಾದ ಪೇಜಾವರ ಶ್ರೀ, ಜಾರ್ಜ್‌ ಫರ್ನಾಂಡಿಸ್‌, ಅರುಣ್‌ ಜೇಟ್ಲಿ, ಸುಷ್ಮಾ ಸ್ವರಾಜ್‌ಗೆ ಪದ್ಮ ವಿಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ. ಬಾಕ್ಸಿಂಟ್‌ ಪಟು ಮೇರಿ ಕೋಮ್‌ಗೂ ಪದ್ಮವಿಭೂಷಣ ಗೌರವ ದಕ್ಕಿದೆ.
ಒಟ್ಟು ಏಳು ಗಣ್ಯರಿಗೆ ಪದ್ಮವಿಭೂಷಣ ಗೌರವ ನೀಡಲಾಗಿದೆ. 16 ಮಂದಿಗೆ ಪದ್ಮಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ. 118 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.
ರಾಜ್ಯದ 8 ಸಾಧಕರಿಗೆ ಪದ್ಮ ಶ್ರೀ ಗೌರವ ಸಂದಿದೆ.
ಅಕ್ಷರ ಸಂತ ಎಂದೇ ಖ್ಯಾತರಾಗಿರುವ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿದೆ.

ಇವರು ಕಳೆದ 20 ವರ್ಷಗಳಿಂದ ದಕ್ಷಿಣ ಕನ್ನಡದ ಕೊಣಾಜೆ ಸಮೀಪದ ಹರೇಕಳ ನ್ಯೂ ಪಡ್ಪು ಗ್ರಾಮದಲ್ಲಿ ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ. ವಿಶೇಷವೆಂದರೆ ತನಗಿಲ್ಲದ ಶಿಕ್ಷಣ ತನ್ನ ಊರಿನ ಮಕ್ಕಳಿಗೆ ಸಿಗಬೇಕು ಎನ್ನುವ ಮಹದಾಸೆಯಿಂದ ಕಿತ್ತಳೆ ಮಾರುತ್ತಿದ್ದ ಹರೇಕಳ ಹಾಜಬ್ಬ, ಕಿತ್ತಳೆ ಮಾರಿ ಜೀವನ ಸಾಗಿಸಿ ಉಳಿದ ಹಣದಿಂದಲೇ ಅಂಗನವಾಡಿ ಆರಂಭಿಸುವ ಮೂಲಕ ಶಿಕ್ಷಣ ನೀಡುತ್ತಿದ್ದಾರೆ.
2004ರಲ್ಲಿ ಕನ್ನಡ ಪತ್ರಿಕೆಯೊಂದು ಹಾಜಬ್ಬರನ್ನು `ವರ್ಷದ ವ್ಯಕ್ತಿ’ ಎಂದು ಪ್ರಶಸ್ತಿ ನೀಡಿ ಗುರುತಿಸುವ ಮೂಲಕ ಹಾಜಬ್ಬ ಬೆಳಕಿಗೆ ಬಂದಿದ್ದರು. ಬಳಿಕ ದೆಹಲಿಯ ಸಿಎನ್‍ಎನ್-ಐಬಿಎನ್ `ರಿಯಲ್ ಹೀರೋ’ ಪ್ರಶಸ್ತಿ ನೀಡಿ ಗೌರವಿಸಿತ್ತು.

ಮಂಗಳೂರು ವಿಶ್ವವಿದ್ಯಾನಿಲಯ ಇರುವ ಕೊಣಾಜೆ ಸಮೀಪದ ಹರೇಕಳದಲ್ಲಿ ಗ್ರಾಮೀಣ ಮಕ್ಕಳಲ್ಲಿ ಶಾಲೆಯ ಸೌಲಭ್ಯ ಇರಲಿಲ್ಲ. ಮಂಗಳೂರಿನ ಕೇಂದ್ರ ಪ್ರದೇಶ ಸ್ಟೇಟ್ ಬ್ಯಾಂಕ್ ಸರ್ಕಲ್ ನಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದ ಹಾಜಬ್ಬ ತಾವೇ ಶಾಲೆಯೊಂದನ್ನು ತನ್ನೂರಿನಲ್ಲಿ ನಿರ್ಮಿಸಿದ್ದರು.
ಕಿತ್ತಳೆ ಮಾರಾಟ ಮಾಡುತ್ತಿದ್ದಾಗ ವಿದೇಶಿ ಮಹಿಳೆಯ ಆಂಗ್ಲ ಭಾಷೆಯ ಪ್ರಶ್ನೆಗೆ ಉತ್ತರ ನೀಡಲಾಗದ ಹಾಜಬ್ಬರಿಗೆ ಶಿಕ್ಷಣದ ಮಹತ್ವ ಅರಿವಾಗಿತ್ತು. ಈ ಹಿನ್ನೆಲೆಯಲ್ಲಿಯೇ ತನ್ನೂರಿನ ಮಕ್ಕಳಿಗೆ ಶಾಲೆ ತೆರೆಯಲು ಕಚೇರಿಯಿಂದ ಕಚೇರಿಗೆ ಅಲೆದು ಶಾಲೆ ನಿರ್ಮಾಣ ಮಾಡಿದ್ದರು. ಇವರ ಸಾಧನೆಯ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದರೂ ಹೆಚ್ಚಿನ ಪ್ರಚಾರ ಪಡೆದುಕೊಂಡಿರಲಿಲ್ಲ. ಇದೀಗ ಅವರು ತನ್ನೂರಿನಲ್ಲಿ ಕಾಲೇಜು ಆರಂಭಿಸುವ ಆಶಯ ಹೊಂದಿದ್ದಾರೆ.

More articles

Latest article