ಒಡಿಯೂರು: ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಫೆಬ್ರವರಿ 3 ಮತ್ತು 4 ರಂದು ಶ್ರೀ ಒಡಿಯೂರು ರಥೋತ್ಸವ-ತುಳುನಾಡ ಜಾತ್ರೆ ಸಂಪನ್ನಗೊಳ್ಳಲಿದೆ. ತುಳು ಭಾಷೆ ಸಂಸ್ಕೃತಿಯ ಜಾಗೃತಿಗಾಗಿ ೩ರಂದು ಸೋಮವಾರ ಇಪ್ಪತ್ತನೆ ’ತುಳು ಸಾಹಿತ್ಯ ಸಮ್ಮೇಳನ’ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಎ. ಸುಬ್ಬಣ್ಣ ರೈ ಅವರ ಅಧ್ಯಕ್ಷತೆಯಲ್ಲಿ ಜರಗಲಿರುವುದು. ತುಳುನಾಡ್ದ ಜಾತ್ರೆಯ ಸಾಹಿತ್ಯ ಹಬ್ಬವನ್ನು ಪರಮಪೂಜ್ಯ ಒಡಿಯೂರು ಶ್ರೀಗಳವರು ಉದ್ಘಾಟಿಸಲಿರುವರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಯಡಪಡಿತ್ತಾಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಶ್ರೀ ದಯಾನಂದ ಕತ್ತಲ್‌ಸಾರ್, ಕೇರಳ ತುಳು ಅಕಾಡೆಮಿಯ ಅಧ್ಯಕ್ಷ ಉಮೇಶ್ ಸಾಲ್ಯಾನ್ ವಿಶೇಷ ಅಭ್ಯಾಗತರಾಗಿ ಭಾಗವಹಿಸಲಿರುವರು.

ನಂತರ ಜರಗುವ ಋಷಿ-ಕೃಷಿ-ಪರಪೋಕುದ ಸಂಸ್ಕೃತಿ ’ತುಳಿಪು’ ಗೋಷ್ಠಿಯಲ್ಲಿ ಋಷಿ ಸಂಸ್ಕೃತಿಯ ಬಗ್ಗೆ ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಸಂಚಾಲಕ ಡಾ. ಗಣನಾಥ ಶೆಟ್ಟಿ ಎಕ್ಕಾರ್, ಕೃಷಿ ಸಂಸ್ಕೃತಿ-ನಿವೃತ್ತ ಪ್ರಾಧ್ಯಾಪಕ ಡಾ. ಪ್ರಭಾಕರ ಶಿಶಿಲ, ಪರಪೋಕುದ ಸಂಸ್ಕೃತಿ-ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಿ. ಯದುಪತಿ ಗೌಡ ಅವರು ಪ್ರಬಂಧ ಮಂಡಿಸುವರು.
ಅಪರಾಹ್ನ ಕವಿ-ಕಾವ್ಯ-ಪದೊ-ಚಿತ್ರೊ-ನಲಿಕೆ ಎಂಬ ಕವಿಗೋಷ್ಠಿಯಲ್ಲಿ ಮಲಾರು ಜಯರಾಮ ರೈ, ಹರೀಶ್ ಶೆಟ್ಟಿ ಸೂಡ, ವಿಶ್ವನಾಥ ಕುಲಾಲ್ ಮಿತ್ತೂರು, ಪೂವಪ್ಪ ನೆರಳಕಟ್ಟೆ, ರಾಜಶ್ರೀ ಟಿ. ರೈ, ಆಶಾ ದಿಲೀಪ್ ಸುಳ್ಯಮೆ ಭಾಗವಹಿಸಿ ಕಾವ್ಯ ವಾಚಿಸುವರು. ರವಿರಾಜ್ ಶೆಟ್ಟಿ ಒಡಿಯೂರು ಸಂಗೀತ ನೀಡಲಿದ್ದಾರೆ. ಗಣೇಶ್ ಸೋಮಯಾಜಿ ಮತ್ತು ಶರತ್ ಹೊಳ್ಳ ಚಿತ್ರ ಬಿಡಿಸಲಿದ್ದಾರೆ. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳು ನೃತ್ಯ ಮಾಡಲಿದ್ದಾರೆ.

ಒಡಿಯೂರು ಶ್ರೀಗಳು ಮತ್ತು ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಅವರ ಉಪಸ್ಥಿತಿಯಲ್ಲಿ ಜರಗುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ ಎಂ.ಎಲ್. ಸಾಮಗ, ಅಖಿಲ ಭಾರತ ತುಳು ಒಕ್ಕೂಟದ ಕಾರ್ಯದರ್ಶಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ನಿಟ್ಟೆ ಶಶಿಧರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಶ್ರೀ ಸಂಸ್ಥಾನದ ವತಿಯಿಂದ ಜಗದೀಶ ಶೆಟ್ಟಿ ಬಿಜೈ (ಯೋಗ), ಕಮಲಾಕ್ಷ ಬಂಗೇರ ಹರಿವೇಕಳ(ಮಾಜಿ ಸೈನಿಕ-ಮುಳುಗುತಜ್ಞ), ಲಕ್ಷ್ಮೀ ಬೇಡಗುಡ್ಡೆ (ನಾಟಿವೈದ್ಯೆ), ಬಾಲಕೃಷ್ಣ ಶೆಟ್ಟಿ ಪಾವೂರು (ಬೆನ್ನಿ), ಕುಟ್ಟಿ ನಲಿಕೆ (ದೈವಾರಾಧನೆ) ಹೀಗೆ ಐವರು ಸಾಧಕರಿಗೆ ’ತುಳುಸಿರಿ’ ಪ್ರಶಸ್ತಿ ನೀಡಿ ಪೂಜ್ಯ ಶ್ರೀಗಳು ಗೌರವಿಸುವರು.

ಸಂಜೆ ಶಾರದಾ ಆರ್ಟ್ಸ್ ಐಸಿರಿ ಕಲಾವಿದರು, ಮಂಜೇಶ್ವರ ಅವರಿಂದ ’ಗಿರಿಗಿಟ್ ಗಿರಿಧರೆ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಸಮಾರಂಭದಲ್ಲಿ ಶ್ರೀ ದತ್ತ ತುಳು ಜಾನಪದ ಮತ್ತು ಇತಿಹಾಸ ಅಧ್ಯಯನ ಕೇಂದ್ರ, ಹಿರ್ಗಾನ, ಕಾರ್ಕಳ ಇವರಿಂದ ತುಳುನಾಡಿನ ಹಳೆಯ ಪುಸ್ತಕಗಳ, ವಸ್ತುಗಳ, ನಾಣ್ಯಗಳ ಪ್ರದರ್ಶನ ನಡೆಯಲಿದೆ.
ಶ್ರೀ ಒಡಿಯೂರು ರಥೋತ್ಸವ, ಒಡಿಯೂರು ಶ್ರೀ ಸಂಸ್ಥಾನದ ಪ್ರತಿಷ್ಠಾ ಮುಹೂರ್ತವನ್ನು ಲಕ್ಷಿಸಿ ತಿಥಿಗನುಗುಣವಾಗಿ ರಥೋತ್ಸವವಾಗಿ ಆಚರಿಸಲಾಗುತ್ತದೆ. ಒಡಿಯೂರು ಶ್ರೀ ಸಂಸ್ಥಾನ ಸ್ಥಾಪನೆಗೊಂಡು ೩೧ನೇ ವರ್ಷದ ವಾರ್ಷಿಕ ಹಬ್ಬ, ಶ್ರೀ ಒಡಿಯೂರು ರಥೋತ್ಸವ ಜರಗುತ್ತಿರುವುದು ವಿಶೇಷ. ಅಂದು ಪೂರ್ವಾಹ್ನ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಸಂಪನ್ನಗೊಳ್ಳಲಿದೆ.
ಪೂಜ್ಯ ಶ್ರೀಗಳವರು, ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರ ದಿವ್ಯ ಉಪಸ್ಥಿತಿಯಲ್ಲಿ ಪೂರ್ವಾಹ್ನ ಜರಗುವ ಧರ್ಮಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳೆಪ್ಪಾಡಿಗುತ್ತು, ಪುತ್ತೂರು ಶಾಸಕ ಸಂಜೀವ ಮಠಂದೂರು, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಜಿತ್‌ಕುಮಾರ್ ಹೆಗ್ಡೆ ಶಾನಾಡಿ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಅಂಕಲೇಶ್ವರದ ಹೈಟೆಕ್ ಇಲೆಕ್ಟ್ರಿಫಿಕೇಶನ್ ಇಂಜಿನಿಯರಿಂಗ್‌ನ ಆಡಳಿತ ನಿದೇಶಕ ರವಿನಾಥ್ ವಿ. ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಕಾರ್ಯಕ್ರಮದಲ್ಲಿ ಅಂತರ್‌ರಾಷ್ಟ್ರೀಯ ಕ್ರೀಡಾಪಟು ಶ್ರೀ ಪಟ್ಲಗುತ್ತು ಅನೀಶ್ ಶೆಟ್ಟಿ ಅವರಿಗೆ ಶ್ರೀ ಗುರುದೇವಾನುಗ್ರಹ ಯುಪುರಸ್ಕಾರ ನೀಡಿ ಪೂಜ್ಯ ಶ್ರೀಗಳವರು ಅನುಗ್ರಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟ್ಯ ವಿದ್ಯಾನಿಲಯ (ರಿ.), ಕುಂಬಳೆ ಅವರಿಂದ ’ನೃತ್ಯ ಸಂಭ್ರಮ’ ಹಾಗೂ ಆರ್ಯಭಟ ಪ್ರಶಸ್ತಿ ಪುರಸ್ಕೃತ ಶ್ರೀ ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ’ಭಕ್ತಿಗಾನ ವೈಭವ’ ಜರಗಲಿದೆ.
ರಾತ್ರಿ ಶ್ರೀ ದತ್ತಾಂಜನೇಯ ದೇವರ ವೈಭವೋಪೇತ 12 ಕಿ.ಮೀ. ರಥಯಾತ್ರೆ ಕಣ್ಣಿಗೆ ಹಬ್ಬವಾಗಿ ಜನಮನವನ್ನು ಆಕರ್ಷಿಸುವ ಉತ್ಸವವಾಗಿ ಮೂಡಿಬರಲಿದೆ. ಈ ಸುಸಂದರ್ಭ ಮಿತ್ತನಡ್ಕದಲ್ಲಿ ಹಿಂದೂ ಸೇವಾ ಸಮಿತಿ ಮಿತ್ತನಡ್ಕ ಇವರ ಪ್ರಾಯೋಜಕತ್ವದಲ್ಲಿ ಸಿಂಚನ ಮ್ಯೂಸಿಕಲ್ಸ್ ಪೆರ್ಲ ಇವರಿಂದ ಭಕ್ತಿ ರಸಮಂಜರಿ ಹಾಗೂ ಪುಟಾಣಿಗಳಿಂದ ನೃತ್ಯ ವೈವಿಧ್ಯ. ಕಮ್ಮಾಜೆಯಲ್ಲಿ ಅಮ್ಮ ಗ್ರೂಪ್ಸ್‌ನ ವತಿಯಿಂದ ಸಾಂಸ್ಕೃತಿಕ ವೈವಿಧ್ಯ. ಕನ್ಯಾನದಲ್ಲಿ ಶ್ರೀ ಶ್ರೀಧರ ಶೆಟ್ಟಿ ಗುಬ್ಯಮೇಗಿನಗುತ್ತು ಇವರ ಪ್ರಾಯೋಜಕತ್ವದಲ್ಲಿ ಶಿವಂ ಡ್ಯಾನ್ಸ್ ಅಕಾಡೆಮಿ, ವಿಟ್ಲ ಇವರಿಂದ ಸಾಂಸ್ಕೃತಿಕ ವೈವಿಧ್ಯ ಜರಗಲಿದೆ.
ಈ ಸಮಾರಂಭಕ್ಕೆ ಊರ-ಪರ ಊರಿನ ಎಲ್ಲಾ ಬಂಧುಗಳು ಹಸಿರುವಾಣಿ-ಹೊರೆಕಾಣಿಕೆಗಳನ್ನು ಫೆಬ್ರವರಿ ೧ರಂದು ಶನಿವಾರ ಶ್ರೀ ಸಂಸ್ಥಾನಕ್ಕೆ ಸಮರ್ಪಿಸಲಿದ್ದಾರೆ. ಬೆಳಿಗ್ಗೆ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಹಸಿರುವಾಣಿ ಮೆರವಣಿಗೆಗೆ ಚಾಲನೆ ನೀಡಿ ಪಂಪುವೆಲ್-ಬಿ.ಸಿ.ರೋಡ್-ಕಲ್ಲಡ್ಕ-ವಿಟ್ಲ ಮಾರ್ಗವಾಗಿ ಬಂದು ಕನ್ಯಾನದಿಂದ ಮಧ್ಯಾಹ್ನ ೨.೦೦ಗಂಟೆಗೆ ಹೊರಟು ಶ್ರೀ ಸಂಸ್ಥಾನಕ್ಕೆ  ತಲಪಲಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here