ಬಂಟ್ವಾಳ, ಜ. ೧೧: ನಾವೂರ ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವರಿಗೆ ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಅಂಗವಾಗಿ ಬಿ.ಸಿ.ರೋಡಿನಿಂದ ನಾವೂರಕ್ಕೆ ಹೊರಕಾಣಿಕೆ ಮೆರವಣಿಗೆಯಲ್ಲಿ ಸಾಗಿ ಬಂದ ಹಿಂದೂ ಬಾಂಧವರಿಗೆ ಅಗ್ರಹಾರ ಮುಸ್ಲಿಂ ಒಕ್ಕೂಟದ ಸದಸ್ಯರು ಕೊಪ್ಪಳದಲ್ಲಿ ತಂಪುಪಾನಿಯ ಹಾಗೂ ಸಿಹಿತಿಂಡಿ ವಿತರಿಸಿ ಸೌಹಾರ್ದತೆ ಮೆರೆದರು.
ಸುಮಾರು ೩.೫ ಕೋಟಿ ವೆಚ್ಚದಲ್ಲಿ ಪುನರ್‌ನಿರ್ಮಾಣಗೊಂಡ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದಲ್ಲಿರುವ ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನಕ್ಕೆ ನವೀಕರಣ ಪುನಃ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ ಜ.೧೦ರಿಂದ ೧೯ರವರೆಗೆ
ನಡೆಯಲಿದೆ. ಈ ನಿಟ್ಟಿನಲ್ಲಿ ಶನಿವಾರ ಸಂಜೆ ೪ಗಂಟೆಗೆ ಬಿ.ಸಿ. ರೋಡಿನ ರಕ್ತೇಶ್ವರಿ ದೇವಿ ದೇವಸ್ಥಾನದ ಬಳಿಯಿಂದ ಹಸಿರು ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆ ಮೆರವಣಿಗೆಯು ಬಂಟ್ವಾಳ ಪೇಟೆ, ಜಕ್ರಿಬೆಟ್ಟು, ಮಣಿಹಳ್ಳ ಮಾರ್ಗವಾಗಿ ದೇವಸ್ಥಾನಕ್ಕೆ ಸಾಗಿತ್ತು. ಈ ವೇಳೆ ಮೆರವಣಿಗೆಯಲ್ಲಿ ಸಾಗಿ ಬಂದ ಹಿಂದೂ ಬಾಂಧವರಿಗೆ ಅಗ್ರಾಹರ್ ಮುಸ್ಲಿಂ ಒಕ್ಕೂಟದ ಸದಸ್ಯರು ವತಿಯಿಂದ ಕೊಪ್ಪಳದಲ್ಲಿ ಮಜ್ಜಿಗೆ, ಲಡ್ಡು ವಿತರಿಸಿದರು.
ಮಸೀದಿ, ಚರ್ಚ್‌ನಿಂದ ಹೊರೆಕಾಣಿಕೆ:
ನಾವೂರ-ಅಗ್ರಹಾರ ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಪಲ್ಲೊಟ್ಟಿ ವೆಲಂಕಣಿ ಮಾತಾ-ಪರ್ಲಾ ಚರ್ಚ್‌ನಿಂದ ವತಿಯಿಂದ ದೇವಸ್ಥಾನಕ್ಕೆ ಹೊರೆಕಾಣಿಕೆ ನೀಡಿದರು. ಅದಲ್ಲದೆ, ನಾವೂರ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಶುಭಕೋರಿ ಕ್ರೈಸ್ತ ಹಾಗೂ ಮುಸ್ಲಿಂ ಸಮುದಾಯದ ವತಿಯಿಂದ ಬ್ಯಾನರ್ ಕೂಡಾ ಹಾಕಲಾಗಿದ್ದು, ಇಲ್ಲಿನ ಸೌಹಾರ್ದತೆಗೆ ಸಾಕ್ಷಿಯಾಗಿದ್ದಲ್ಲದೆ, ಮಾನವೀಯತೆಗಿಂತ ಮಿಗಿಲಾದುದು ಯಾವುದೂ ಇಲ್ಲ ಎಂಬುದನ್ನು ಸಮಾಜಕ್ಕೆ ಸಾರಿದ್ದಾರೆ.
ಕೋಮುಸೂಕ್ಷ್ಮ ಪ್ರದೇಶವೆಂದೇ ಪೊಲೀಸ್ ಕಡತದಲ್ಲಿ ದಾಖಲಾಗಿರುವ ಬಂಟ್ವಾಳದಲ್ಲಿ ಸೌಹಾರ್ದವನ್ನು ಸಾರುವ ಪ್ರಕರಣಗಳೂ ಅಲ್ಲಲ್ಲಿ ನಡೆಯುತ್ತಿದ್ದು, ಇಲ್ಲಿನ ಬಹುಸಂಖ್ಯಾತ ಜನ ಕೋಮು ಸಾಮರಸ್ಯವನ್ನು ಬಯಸುವವರೇ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ. ಜಿಲ್ಲೆಯಲ್ಲಿ ರಾಜಕೀಯ ಕಾರಣಕ್ಕಾಗಿ ಮಾತ್ರ ಸಂಘರ್ಷಗಳು ನಡೆಯುತ್ತಿವೆಯೇ ಹೊರತು ಜನರ ಮಧ್ಯೆ ಯಾವುದೇ ತಾರತಮ್ಯ ಇಲ್ಲ ಎಂಬುದನ್ನು ಇಂತಹ ಸೌಹಾರ್ದ ಕಾರ್ಯಕ್ರಮಗಳು ಸಾರಿ ಹೇಳುತ್ತಿವೆ.