ಬಂಟ್ವಾಳ: ಕಾನೂನು ಸೇವಾ ಪ್ರಾಧಿಕಾರ ಬಂಟ್ವಾಳ, ದ.ಕ.ಜಿಲ್ಲಾ. ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಗ್ರಾಮ ಪಂಚಾಯತ್ ನರಿಕೊಂಬು, ಬಂಟ್ವಾಳ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಶಂಭೂರು ರಸ್ತೆಯಿಂದ ಶಾಲೆಯವರೆಗೆ ನಡೆದ ಜಾಥ ಕಾರ್ಯಕ್ರಮವನ್ನು ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಬ್ಯಾಂಡ್ ಬಾರಿಸಿ ಉದ್ಘಾಟಿಸಿದರು. ಈ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಕಾನೂನಿನ ಅರಿವು ಮೂಡಿಸುವ ಉದ್ದೇಶವಾಗಿದೆ. ಪ್ರತಿಯೊಬ್ಬರು ಕಾನೂನಿನ ಮಾಹಿತಿ ಪಡೆದುಕೊಂಡು ಅಪರಾಧ ಪ್ರಜ್ಞೆಯ ಅರಿವನ್ನು ಹೊಂದಿರಬೇಕು ಎಂದು ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಹೆಣ್ಣು ಮಕ್ಕಳಿಗೆ ಅವಕಾಶವನ್ನು ನೀಡಿದಾಗ ಸಬಲರಾಗುವುದರಲ್ಲಿ ಸಂದೇಹವಿಲ್ಲ. ವ್ಯವಸ್ಥೆಯಲ್ಲಿ ಮಹಿಳೆಯರನ್ನು ಅಬಲೆ ಎಂದು ಬಿಂಬಿಸಲಾಗಿದೆ ಹೊರತು, ಅವಳ ನಿಜವಾದ ಶಕ್ತಿಯ ಬಗ್ಗೆ ಅರಿವಿದೆ ಎಂದರು. ಹೆಣ್ಣು ಮಕ್ಕಳಿಗೆ ಶಿಕ್ಷಣ, ಕಾನೂನಿನ ಅರಿವು ಸಿಕ್ಕಾಗ ನೆಮ್ಮದಿಯ ಜೀವನಕ್ಕೆ ದಾರಿಯಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ.ಪಂ.ಅಧ್ಯಕ್ಷ ಯಶೋಧರ ಕರ್ಬೆಟ್ಟು, ಭಾರತ ಮಾತೆ ಹಾಗೂ ಹೆಣ್ಣು ಮಕ್ಕಳನ್ನು ಪೂಜಿಸುವವರು ನಾವು. ಅದರೂ ಹೆಣ್ಣು ಮಕ್ಕಳ ರಕ್ಷಣೆಯ ಜವಾಬ್ದಾರಿ ಇಲಾಖೆಯ ಜೊತೆ ನಮ್ಮೆಲ್ಲರ ಪಾಲು ಇದೆ. ಯಾವುದೇ ಕಾನೂನು ದುರ್ಬಳಕೆಯಾಗದೆ ಜಾಗೃತರಾಗಿರಬೇಕು ಎಂದು ಅವರು ಹೇಳಿದರು.
ವೇದಿಕೆಯಲ್ಲಿ ತಾ.ಪಂ.ಸದಸ್ಯೆ ಗಾಯತ್ರಿ ರವೀಂದ್ರ ಕಂಬಳಿ, ಗ್ರಾ.ಪಂ.ಸದಸ್ಯರಾದ ವಸಂತ್, ದಿವಾಕರ ಶಂಭೂರು, ಜಯರಾಜ್, ರವೀಂದ್ರ ಸಪಲ್ಯ ನರಿಕೊಂಬು, ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಶೈಲಜಾ, ಶಾಲಾ ಮುಖ್ಯೋಪಾಧ್ಯಾಯ ಕಮಲಾಕ್ಷ, ಶಿಕ್ಷಕಿ ಸುಜಾತ, ಶಿಕ್ಷಕ ಸಂಘದ ಉಮಾಕರ, ಸ್ತ್ರಿಶಕ್ತಿ ಒಕ್ಕೂಟದ ಅಧ್ಯಕ್ಷೆ ಸುಧಾ, ಕಾರ್ಯದರ್ಶಿ ಜಯತೀರ್ಥ, ಮೇಲ್ವಿಚಾರಕಿ ಶಾಲಿನಿ, ನೀತಾ ಕುಮಾರಿ, ಸಿಂದೂ, ನರಿಕೊಂಬು ಪಿ.ಡಿ.ಒ.ಶಿವುಜನ ಕೊಂಡ ಹಾಗೂ ಸ್ರ್ತಿಶಕ್ತಿ ಒಕ್ಕೂಟದ ಪದಾಧಿಕಾರಿಗಳು, ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯ ಕರ್ತೆಯರು, ಆಶಾ ಕಾರ್ಯಕರ್ತೆಯರು ಪೋಷಕರು ಉಪಸ್ಥಿತರಿದ್ದರು.
ಪ್ರಭಾರ ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ ಸ್ವಾಗತಿಸಿದರು. ಸಹಾಯಕ ಶಿಶು ಯೋಜನಾಧಿಕಾರಿ ಭಾರತಿ ಕುಂದರ್ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸದಾಶಿವ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಹೆಣ್ಣು ಮಗು ರಕ್ಷಿಸಿ, ಹೆಣ್ಣನ್ನು ಓದಿಸಿ ಎಂಬ ವಿಷಯದ ಕುರಿತು ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತರು.