ನಾಣ್ಯ: ಬಂಟ್ವಾಳ ತಾಲೂಕಿನ ಪುದು ಗ್ರಾಮದ ನಾಣ್ಯ ಶ್ರೀ ರಕ್ತೇಶ್ವರೀ ಕ್ಷೇತ್ರದಲ್ಲಿ ಜನವರಿ 13ರಿಂದ 18ರವರೆಗೆ ನಡೆಯಲಿರುವ ಅಷ್ಟಪವಿತ್ರ ನಾಗಮಂಡಲ ಪುಣ್ಯೋತ್ಸವವು ವಿವಿಧ, ಧಾರ್ಮಿಕ, ಸಾಂಸ್ಕೃತಿಕ, ಸಂಘಟನಾತ್ಮಕ ಕಾರ್ಯಕ್ರಮಗಳೊಂದಿಗೆ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವೇದಮೂರ್ತಿ ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಜನವರಿ 14ರಂದು ಅರ್ಕುಳ ಶ್ರೀ ವರದೇಶ್ವರ ದೇವಸ್ಥಾನದಿಂದ ಶ್ರೀ ಕ್ಷೇತ್ರಕ್ಕೆ ಬೃಹರ್ ಹಸಿರು ವಾಣಿ ಸಮರ್ಪಣಾ ಶೋಭಯಾತ್ರೆ ನಡೆಯಲಿದೆ. ಜನವರಿ 16ರಂದು ಶ್ರೀ ಅಷ್ಟಪವಿತ್ರ ನಾಗಮಂಡಲವು ನಾಗಪಾತ್ರಿಗಳಾದ ಉಡುಪಿ ಸಗ್ರಿ ಗೋಪಾಲಕೃಷ್ಣ ಸಾಮಗ, ಮುದ್ದೂರು ಕೃಷ್ಣಪ್ರಸಾದ್ ವೈದ್ಯ, ಬಾಲಕೃಷ್ಣ ವೈದ್ಯ, ಹಾಗೂ ನಟರಾಜ ವೈದ್ಯರ ಬಳಗದವರೊಂದಿಗೆ ನಡೆಯಲಿರುವುದು ಎಂದು ನಾಗಮಂಡಲೋತ್ಸವ ಸಮಿತಿಯ ಪ್ರಧಾನ ಸಂಚಾಲಕ ತೇವು ತಾರನಾಥ ಕೊಟ್ಟಾರಿ ಅವರು ಕ್ಷೇತ್ರದಲ್ಲಿ ಗುರುವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಕಾರ್ಯಕ್ರಮವು ವಿಶಿಷ್ಟ ರೀತಿಯಲ್ಲಿ ನಡೆಯಲಿದ್ದು ಕಾರ್ಯಕ್ರಮದ ಪೂರ್ವಭಾವಿಯಾಗಿ ಕೃಷಿ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ವಸುಂಧರ ನಮನ ಕಾರ್ಯಕ್ರಮ, ಮಾತೃ ಶಕ್ತಿಯ ಜಾಗೃತಿಗಾಗಿ ಮಾತೃ ನಮನ ಕಾರ್ಯಕ್ರಮ, ಕಾರ್ಯಕರ್ತರಿಂದಲೇ ಊಟದ ಬಟ್ಟಲು ತಯಾರಿ, ಚಪ್ಪರ ನಿರ್ಮಾಣ, ಸ್ವಯಂಸೇವಕರಿಗೆ ಊರಿನ ಮನೆಗಳಿಂದಲೇ ಊಟದ ವ್ಯವಸ್ಥೆ ಮುಂತಾದವುಗಳ ಮೂಲಕ ಒಂದು ಹೊಸ ರೀತಿಯ ಚಿಂತನೆಯನ್ನು ಹುಟ್ಟು ಹಾಕಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಮೋಹನದಾಸ ಸ್ವಾಮೀಜಿ ಶ್ರೀ ಕ್ಷೇತ್ರದಲ್ಲಿ ನಾಗ ಮತ್ತು ರಕ್ತೇಶ್ವರಿ ನೆಲೆಯಾದ ಬಗ್ಗೆ ಹೇಳಿದರು.
ಗೌರವಾಧ್ಯಕ್ಷ ಐತಪ್ಪ ಆಳ್ವ ಸುಜೀರ್‌ಗುತ್ತು, ಕಾರ್‍ಯಾಧ್ಯಕ್ಷ ಚಂಧ್ರಹಾಸ ಡಿ.ಶೆಟ್ಟಿ, ಆಡಳಿತ ಸಮಿತಿ ಅಧ್ಯಕ್ಷ ಪೂವಪ್ಪ ಬಂಗೇರ ನಾಣ್ಯ, ನಾಗಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ, ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ, ರಾಧಾಕೃಷ್ಣ, ಎಂ. ಆರ್.ನಾಯರ್, ನವೀನ್ ಕುಲಾಲ್, ನಾಗರಾಜ್, ಲಕ್ಷ್ಮಣ್, ಗಿರೀಶ್ ಶೆಟ್ಟಿ, ದಿನೇರ್ಶ ಶೆಟ್ಟಿ ಕೊಟ್ಟಿಂಜ ಅವರು ಉಪಸ್ಥಿತರಿದ್ದರು. ಅಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ ಸ್ವಾಗತಿಸಿದರು.
ನಾಣ್ಯ ನಾಗಮಂಡಲದ ಮಂಡಲಕ್ಕೆ ಬೇಕಾದ ಬಣ್ಣಗಳನ್ನು ರಾಸಾಯನಿಕ ಮುಕ್ತವಾಗಿ ಕ್ಷೇತ್ರದಲ್ಲೇ ತಯಾರಿಸುವ ಪ್ರಕ್ರಿಯೆ ಗುರುವಾರ ಪೊಳಲಿ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ಸ್ವತಃ ಒನಕೆಯಿಂದ ಕುಟ್ಟುವ ಮೂಲಕ ಚಾಲನೆ ನೀಡಿದರು. ಪೊಳಲಿ ಸುಬ್ರಮಣ್ಯ ತಂತ್ರಿಗಳ ನೇತೃತ್ವದಲ್ಲಿ ಬಣ್ಣ ತಯಾರಿಸಲಾಗುವುದು, ಅರಶಿನ ಮತ್ತು ಸುಣ್ಣದಿಂದ ಕುಂಕುಮ, ಅರಸಿನದಿಂದ ಹಳದಿ, ನೆಲ್ಲಿಕಾಯಿ ಗಿಡದ ಎಲೆಗಳಿಂದ ಹಸುರು, ಬಿಳಿ ಅಕ್ಕಿಯಿಂದ ಬಿಳಿ ಬಣ್ಣ, ಅಕ್ಕಿಯನ್ನು ಸುಟ್ಟು ಕಪ್ಪುಬಣ್ಣ ತಯಾರಿಸುವ ಬಗ್ಗೆ ಅಲ್ಲಿನ ಭಕ್ತಾದಿಗಳಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಅಷ್ಟ ಪವಿತ್ರ ನಾಗಮಂಡಲ ಸಮಿತಿ ಅಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ, ಕಾರ್ಯಾಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ, ಪ್ರದಾನ ಸಂಚಾಲಕ ತಾರಾನಾಥ್ ಕೊಟ್ಟಾರಿ ತೇವು, ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ, ಉಪಾಧ್ಯಕ್ಷ ರಾಧಾಕೃಷ್ಣ ತಂತ್ರಿ ಪೊಳಲಿ, ಎಂ.ಆರ್. ನಾಯರ್, ಕ್ಷೇತ್ರದ ಅಧ್ಯಕ್ಷ ಪೂವಪ್ಪ ಬಂಗೇರ ನಾಣ್ಯ, ರಾಮಚಂದ್ರ ಬಂಗೇರ ಭಗವತಿ, ಲೋಕನಾಥ ಆಚಾರ್ಯ, ಅರುಣ್ ಶೆಟ್ಟಿ ಪೆರ್ಲ ಬೈಲ್ ತುಂಬೆ, ಎ. ಕೆ. ಗಿರೀಶ್ ಶೆಟ್ಟಿ ಉಪಸ್ಥಿತರಿದ್ದರು.