ಮುಂಬಯಿ: ಕಟೀಲು ಗೋಪಾಲಕೃಷ್ಣ ಆಸ್ರಣ್ಣರು ಧಾರ್ಮಿಕತೆ, ಕಲಾ ಸೇವೆ, ಸಮಾಜ ಸೇವೆ ಹಾಗೂ ಭಕ್ತಿ ನಿಷ್ಠೆಯ ಸದ್ಗುಣಗಳನ್ನು ಹೊಂದಿದ್ದರಿಂದ ಎಲ್ಲರಿಗೂ ಪೂಜ್ಯನೀಯರಾಗಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ| ಡಿ.ವಿರೇಂದ್ರ ಹೆಗ್ಗಡೆ ಹೇಳಿದರು.
ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಪ್ರತಿಮೆ ಅನಾವರಣ, ಸಂಸ್ಮರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಟೀಲು ದಿವಂಗತ ಗೋಪಾಲಕೃಷ್ಣ ಆಸ್ರಣ್ಣರ ಪ್ರತಿಮೆ ಅನಾವರಣಗೊಳಿಸಿ, ಸಾಧಕರಾದ ಕಟೀಲು ಸಂಜೀವನಿ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ, ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್’ಸ್ ಅಸೋಸಿಯೇಶನ್ (ಬಿಎಸ್‌ಕೆಬಿಎ)ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ಉದಯ ಕುಮಾರ್ ಸರಳತ್ತಾಯ ಅವರನ್ನು ಸನ್ಮಾನಿಸಿ ಅಭಿನಂದಿಸಿ ಡಾ| ಹೆಗ್ಗಡೆ ಮಾತನಾಡಿದರು.
ಗೋಪಾಲಕೃಷ್ಣ ಆಸ್ರಣ್ಣ ಸಾತ್ವಿಕತೆ, ದೇವಿಯ ಮೇಲಿಟ್ಟ ಶ್ರದ್ಧೆಯಿಂದ ಅವರ ವ್ಯಕ್ತಿತ್ವ ಬೆಳೆದು ಇಂದು ಎಲ್ಲರ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಅವರ ಪ್ರತಿಮೆ ಅನಾವರಣ ಕೆಲಸ ಶ್ಲಾಘನೀಯ ಎಂದು ಉಡುಪಿ ಪುತ್ತಿಗೆ ಮಠದ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ತಿಳಿಸಿದರು.
ಶ್ರೀಧಾಮ ಮಾಣಿಲಾ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ್ ಪರಮಹಂಸ ಸ್ವಾಮೀಜಿ ಮಾತನಾಡಿ ಪೂಜ್ಯ ಗೋಪಾಲಕೃಷ್ಣ ಆಸ್ರಣ್ಣರ ಧಾರ್ಮಿಕತೆ, ಸೇವಾ ಮನೋಭಾವನೆ ಹಾಗೂ ಧಾರ್ಮಿಕ ಪರಂಪರೆ ಇನ್ನೂ ಕೂಡಾ ಮುಂದುವರಿಯಬೇಕು ಎಂದು ಹೇಳಿದರು.
ಗೋವಾದ ಎನ್‌ಐಟಿ ನಿರ್ದೇಶಕ ಡಾ| ಗೋಪಾಲ ಮೊಗೆರಾಯ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ.ಚೌಟ, ಮುಂಬಯಿ ಉದ್ಯಮಿಗಳಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಕಡಂದಲೆ ಸುರೇಶ್ ಎಸ್.ಭಂಡಾರಿ, ಪ್ರವೀಣ್ ಸೋಮೇಶ್ವರ, ಸಾಯಿ ರಾಧಾ ಸಮೂಹದ ಆಡಳಿತ ನಿರ್ದೇಶಕ ಮನೋಹರ್ ಎಸ್.ಶೆಟ್ಟಿ, ಸಗ್ರಿ ಗೋಪಾಲಕೃಷ್ಣ ಸಾಮಗ, ಹರಿಕೃಷ್ಣ ಪುನರೂರು, ಪ್ರದೀಪಕುಮಾರ್ ಕಲ್ಕೂರ, ಕದ್ರಿ ನವನೀತ ಶೆಟ್ಟಿ, ವಾಸುದೇವ ರಾವ್ ಪುನರೂರು, ಶ್ರೀಪತಿ ಭಟ್ ಮೂಡಬಿದಿರೆ, ಯುಗಪುರುಷ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ, ಯಕ್ಷ ಲಹರಿ ಅಧ್ಯಕ್ಷ ಪಿ.ಸತೀಶ್ ರಾವ್, ಮೋಹನ್ ಮೆಂಡನ್, ದೇವಪ್ರಸಾದ್ ಪುನರೂರು, ದೊಡ್ಡಯ್ಯ ಮೂಲ್ಯ, ಈಶ್ವರ್ ಕಟೀಲು, ಲೋಕಯ್ಯ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಸಂಘಟಕ ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿದರು. ಪು. ಗುರುಪ್ರಸಾದ್ ಸನ್ಮಾನ ಪತ್ರ ವಾಚಿಸಿದರು. ಡಾ| ರಮ್ಯ ರವಿತೇಜ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.