ಈ ಹುಚ್ಚು ಬಯಕೆ
ಹುಟ್ಟಿದ್ದೇ ತಡ
ಆ ಪರಮ ಶಿವನನ್ನು ಕಾಡಿ ಬೇಡಿ
ಕನಸಲ್ಲೇ
ಪಡೆದ ವರ ಇದು..!?
ನಾ ಕಂಡ ಕನಸೆಲ್ಲ
ನಿಜವಾಗುವುದು..!
ನಿನ್ನೆ ಕಂಡ ಕನಸು
ಸೂರ್ಯನನ್ನೇ ಮುಟ್ಟಿ ಬಂದದ್ದು..!
ಇಂದು..
ಹಗ್ಗವನ್ನು ಹಾವೆಂದು
ಬರೆಯುವ ಪೇಪರ್ ನಲ್ಲಿ..,
ಬೆಳಿಗ್ಗೆಯಿಂದ ಸಂಜೆ ತನಕ
ಒಂದನ್ನೇ ರಿಪೀಟ್ ಮಾಡಿ
ತೋರಿಸುವ ನ್ಯೂಸ್ ಚಾನಲ್ ಗಳಲ್ಲಿ..,
ಕಥೆ ಕಟ್ಟಿ, ಬಣ್ಣ ಹಚ್ಚಿ
ಫೇಸ್ ಬುಕ್ ವಾಲ್ ನಲ್ಲಿ
ವಾಟ್ಸ್ ಆಪ್ ಸ್ಟೇಟಸ್ ನಲ್ಲಿ
ಟ್ವಿಟರ್ ಕಾಮೆಂಟ್ ಗಳಲ್ಲಿ
ಎಲ್ಲೆಲ್ಲೂ ಅದೇ ವಿಷಯ…!
ಕೆಲವರು
ನನ್ನ ದೇವರೆಂದು,
ಮಹಾ ವಿಜ್ಞಾನಿ,
ಭಾರತದ ಹೆಮ್ಮೆ..
ಇದೊಂದು ಮಹಾಸಾಧನೆ
ಹೊಸ ಇತಿಹಾಸ
ಎಂದೆಲ್ಲ ಬಣ್ಣಿಸಿದರೆ.,
ಮತ್ತೆ ಕೆಲವರು
ಇದು ಸುಳ್ಳು,
ಮಹಾ ಮೋಸ
ಇದು ಅಸಾಧ್ಯ
ಸತ್ಯ ತಿಳಿಯಲೇ ಬೇಕು..
ಎಂದೆಲ್ಲಾ ವಾದ ಮಂಡಿಸಿದರು..
ನನ್ನ ಪರ ಒಬ್ಬರು,ವಿರೋಧ ಮತ್ತೊಬ್ಬರು..
ಕೊನೆಗೆ ಸತ್ಯ ಅನ್ವೇಷಣೆಗೆ
ನನ್ನೇ ಪ್ರಶ್ನಿಸಲಾಯಿತು..
ಏನು ಉತ್ತರಿಸಲಿ..!
ಬರೀ ಕನಸೆಂದು ಹೇಳಲೇ
ಅಥವಾ ನಾ ಕಂಡ ಕನಸು ನಿಜವಾಗುತ್ತೆಂದು
ಹೇಳಲೇ
ಅಥವಾ
ನೀವು ನೀವು ತರ್ಕಿಸುವುದನ್ನು
ನಿಲ್ಲಿಸಿ ಎನ್ನಲೇ..?
ಅಥವಾ
ನೀವು ಕಂಡದ್ದೆಲ್ಲ ನಿಜವಲ್ಲ
ಎಂದು ಬಿಡಲೇ..!
✍ಯತೀಶ್ ಕಾಮಾಜೆ