ಬಂಟ್ವಾಳ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ- ಮೂಡಬಿದ್ರಿ ಲೋಕೋಪಯೋಗಿ ರಸ್ತೆಯ ಸೋರ್ನಾಡುನಿಂದ ಬಂಟ್ವಾಳ ವರೆಗಿನ ರಸ್ತೆ ಅಗಲೀಕರಣ, ಮರುಡಾಮರೀಕರಣ ಕಾಮಗಾರಿಯು ಪ್ರಾರಂಭಗೊಂಡು ಮೂರು ತಿಂಗಳು ಕಳೆದರೂ ಡಾಮರೀಕರಣ ಕಾಮಗಾರಿ ಪ್ರಾರಂಭಗೊಳ್ಳದ ಕಾರಣ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ತೀವ್ರ ತರಾಟೆಗೆ ತೆಗೆದುಕೊಂಡು ಒಂದು ತಿಂಗಳ ಒಳಗೆ ಮರು ಡಾಮರಿಕರಣ ಕಾಮಗಾರಿ ಮುಕ್ತಾಯಗೊಳಿಸಲು ಸಂಬಂಧಪಟ್ಟ ಇಂಜಿನಿಯರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಸೋರ್ನಾಡು ಬಂಟ್ವಾಳ ರಸ್ತೆ ಅಗಲೀಕರಣ, ಮರು ಡಾಮರೀಕರಣಕ್ಕಾಗಿ ಕೇಂದ್ರ ಸರ್ಕಾರದ ಸಿ.ಆರ್ .ಎಫ್ .ಯೋಜನೆಯಾಡಿ 4 ಕೋಟಿ ರೂಪಾಯಿ ಅನುದಾನ ಮಂಜೂರುಗೊಂಡು, ಕಾಮಗಾರಿ ಅನುಷ್ಠಾನವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಕೈಗೆತ್ತಿಕೊಂಡಿದೆ.
ರಸ್ತೆ ಕಾಮಗಾರಿ ಪ್ರಾರಂಭವಾಗಿ ಮೂರು ತಿಂಗಳು ಕಳೆದರೂ ರಸ್ತೆಯ ಉದ್ದಗಲಕ್ಕೂ ಇಕ್ಕೆಲಗಳಲ್ಲಿನ ಅಗಲೀಕರಣ, ಚರಂಡಿ ಕಾಮಗಾರಿ ವಿಳಂಬವಾಗಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ರಸ್ತೆಬದಿಯಲ್ಲಿ ಕಲ್ಲುಗಳ ರಾಶಿ ಮತ್ತು ಧೂಳಿನಿಂದಾಗಿ ದ್ವಿಚಕ್ರ ವಾಹನ ಸೇರಿದಂತೆ ಇತರ ವಾಹನ ಸವಾರರಿಗೆ ತೂಂಬಾ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ದಿನಂಪ್ರತಿ ಶಾಸಕರ ಕಚೇರಿಗೆ ಅನೇಕ ದೂರುಗಳು ಬಂದಿರುತ್ತದೆ.
ಈ ಸಂಬಂಧ ಶಾಸಕರು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಹಾಯಕ ಇಂಜಿನಿಯರ್ ಮುರುಗೇಶ್ ಅವರಿಗೆ ಸಂಪರ್ಕಿಸಿ ಜನವರಿ ತಿಂಗಳ ಅಂತ್ಯದೊಳಗೆ ಮರುಡಾಮರೀಕರಣ ಕಾಮಗಾರಿ ಮುಕ್ತಾಯ ಗೊಳಿಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ತಿಳಿಸುವಂತೆ ಸೂಚನೆ ನೀಡಿರುತ್ತಾರೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ. ಇವತ್ತು ಸಂಜೆ ರಾಷ್ಟ್ರೀಯ ಹೆದ್ದಾರಿಯ ಉನ್ನತ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇಂಜಿನಿಯರ್ ಮತ್ತು ಗುತ್ತಿಗೆದಾರರು ಕಾಮಗಾರಿ ವೀಕ್ಷಿಸಿದರು.