Wednesday, October 18, 2023

ಮಂಗಳೂರು- ಧರ್ಮಸ್ಥಳ: ಬಸ್ ನಲ್ಲಿ ನೇತಾಡಿಕೊಂಡು ಹೋಗುವ ಪ್ರಯಾಣಿಕರು

Must read

ಬಂಟ್ವಾಳ: ಧರ್ಮಸ್ಥಳ-ಮಂಗಳೂರು ಮಾರ್ಗವಾಗಿ ಹೋಗುವ ಬಸ್ ಗಳ ಸಂಖ್ಯೆ ಕಡಿಮೆಯಿರುವುದರಿಂದ ಬೆಳಗ್ಗೆ ಮತ್ತು ಸಂಜೆ ಹೊತ್ತು ಪ್ರಯಾಣಿಕರು ನೇತಾಡಿಕೊಂಡು ಹೋಗಬೇಕಾದ ಸ್ಥಿತಿ ಇದೆ. ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳ ಓಡಾಟ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಇದೆ ಎಂದು ಕೆಎಸ್‌ಆರ್‌ಟಿಸಿ ಹೇಳುತ್ತಿದೆ.
ಕಳೆದ ಮಳೆಗಾಲದಲ್ಲಿ ಚಾರ್ಮಾಡಿ ಘಾಟ್ ರಸ್ತೆ ಕುಸಿದಿದ್ದು, ಘಾಟ್ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಚಾರ್ಮಾಡಿ ಘಾಟ್ ಮೂಲಕ ಮಂಗಳೂರಿನಿಂದ ಚಿಕ್ಕಮಗಳೂರು, ಬೀರೂರು, ಕಡೂರು, ದಾವಣಗೆರೆ, ಹರಪನಹಳ್ಳಿ, ಶಿವಮೊಗ್ಗ, ಬಳ್ಳಾರಿ ಮೊದಲಾದ ರೂಟ್‌ಗಳಲ್ಲಿ ಸಾಗುವ ಬಸ್ಸುಗಳು ಪರ್ಯಾಯ ರಸ್ತೆಯ ಮೂಲಕ ಸಾಗುತ್ತಿವೆ. ಈ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರು ಪ್ರಸ್ತುತ ಮಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುವ ಬಸ್ಸುಗಳಲ್ಲೇ ಹೋಗುತ್ತಿರುವ ಕಾರಣ ಧರ್ಮಸ್ಥಳ ಬಸ್ಸುಗಳು ರಷ್ ಆಗುತ್ತಿವೆ ಎಂಬುದು ಕೆಎಸ್‌ಆರ್‌ಟಿಸಿಯ ವಾದವಾಗಿದೆ.


ಮಂಗಳೂರು-ಧರ್ಮಸ್ಥಳ ಮಾರ್ಗವಾಗಿ ಹೋಗುವ ಕೆಎಸ್‌ಆರ್‌ಟಿಸಿ ಬಸ್ ಗಳು ನಿತ್ಯ ಮೂರಕ್ಕೂ ಅಧಿಕ ಟ್ರಿಪ್‌ಗಳನ್ನು ನಡೆಸಿದರೂ ಈ ಸಮಸ್ಯೆ ಇದೆ. ಉಜಿರೆ-ಬೆಳ್ತಂಗಡಿ ಮಾರ್ಗವಾಗಿ ಮಂಗಳೂರು ಸೇರಿದಂತೆ ಇನ್ನಿತರ ಪ್ರದೇಶಕ್ಕೆ ನಿತ್ಯ ಸಂಚರಿಸುವ ಪ್ರಯಾಣಿಕರು ಬೇಗ ತಲುಪಬೇಕೆಂಬ ಉದ್ದೇಶದಿಂದ ಚಾರ್ಮಾಡಿ ಘಾಟ್ ರಸ್ತೆಯ ಮೂಲಕ ಸಾಗುವ ಎಕ್ಸ್‌ಪ್ರೆಸ್ ಬಸ್ಸುಗಳನ್ನೇ ಆಶ್ರಯಿಸುತ್ತಿದ್ದರು.


ಕೆಲ ದಿನಗಳ ಹಿಂದೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಮಿನಿ ಬಸ್ಸುಗಳ ಓಡಾಟಕ್ಕೆ ಅವಕಾಶ ನೀಡಿದರೂ, ಮಂಗಳೂರಿಂದ ದೂರದ ಊರುಗಳಿಗೆ ತೆರಳುವ ಕೆಂಪು ಬಸ್ಸುಗಳು ಪರ್ಯಾಯ ರಸ್ತೆಯಲ್ಲೇ ಸಾಗುವುದರಿಂದ ಧರ್ಮಸ್ಥಳ ಬಸ್ಸುಗಳು ರಷ್ ಇರುತ್ತವೆ.
ಧರ್ಮಸ್ಥಳ ರೂಟ್‌ನಿಂದ ಬಿ.ಸಿ.ರೋಡು ಕಡೆಗೆ ಬರುವ ಪ್ರಯಾಣಿಕರು ಬೆಳಗ್ಗಿನ ಹೊತ್ತು ಹಾಗೂ ಬಿ.ಸಿ.ರೋಡಿನಿಂದ ಧರ್ಮಸ್ಥಳ ರೂಟ್‌ನಲ್ಲಿ ಹೋಗುವ ಪ್ರಯಾಣಿಕರು ಸಂಜೆಯ ಹೊತ್ತು ನೇತಾಡಿಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಸುಮಾರು ಪೂಂಜಾಲಕಟ್ಟೆ ವರೆಗಿನ ಪ್ರಯಾಣಿಕರಿಗೆ ಈ ತೊಂದರೆ ಇದೆ. ಬೆಳಗ್ಗೆ ಹಾಗೂ ಸಂಜೆ ಉಜಿರೆ-ಬೆಳ್ತಂಗಡಿ-ಮಡಂತ್ಯಾರು ಮಾರ್ಗದಲ್ಲಿ ಪ್ರಯಾಣಿಕರ ಒತ್ತಡ ಹೆಚ್ಚಿರುತ್ತದೆ. ಅಂದರೆ ಸಾಕಷ್ಟು ಸಂಖ್ಯೆಯಲ್ಲಿ ಈ ರಸ್ತೆಯಲ್ಲಿ ವಿದ್ಯಾರ್ಥಿಗಳು ಸಂಚರಿಸುವುದರಿಂದ ಶಾಲಾ ದಿನಗಳಲ್ಲಿ ನಿತ್ಯವೂ ನೇತಾಡುವ ಪರಿಸ್ಥಿತಿ ಇದೆ. ಸಂಜೆಯ ಹೊತ್ತು ಬಿ.ಸಿ.ರೋಡು ಬಸ್ ನಿಲ್ದಾಣ ಬಳಿ ನಿಂತರೆ ಈ ಸಮಸ್ಯೆ ಅರಿವಿಗೆ ಬರುತ್ತದೆ. ಹೀಗಾಗಿ ಬಸ್ಸುಗಳ ಸಮಯದಲ್ಲೂ ವ್ಯತ್ಯಾಸಗಳು ಕಂಡು ಬರುತ್ತದೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸುತ್ತವೆ.
ಈ ಸಮಸ್ಯೆ ಮಂಗಳೂರು ವಿಭಾಗದಲ್ಲಿ ಮಾತ್ರ ಇದೆ. ಬೆಳ್ತಂಗಡಿಯ ಟಿಸಿ ಪಾಯಿಂಟ್‌ನ ಮಾಹಿತಿ ಪ್ರಕಾರ ಧರ್ಮಸ್ಥಳ- ಮಂಗಳೂರು ಮಾರ್ಗದಲ್ಲಿ ಹತ್ತಾರು ಬಸ್ಸುಗಳು ಮೂರಕ್ಕೂ ಅಧಿಕ ಟ್ರಿಪ್‌ಗಳಲ್ಲಿ ಸಂಚರಿಸುತ್ತವೆ. ಅಂದರೆ ಈ ರೂಟ್‌ನಲ್ಲಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಮಾತ್ರ ಅಂದರೆ ಮಂಗಳೂರು ೧,೨ ಹಾಗೂ ೩ನೇ ಡಿಪೋದ ಗಾಡಿಗಳು ಸಂಚರಿಸುತ್ತವೆ. ಕೆಲ ವರ್ಷಗಳ ಹಿಂದೆ ಈ ರೂಟ್‌ನಲ್ಲಿ ಪುತ್ತೂರು ವಿಭಾಗದ ಗಾಡಿಗಳೂ ಸಂಚರಿಸುತ್ತಿದ್ದವು. ಮಂಗಳೂರಿನಿಂದ ಎಲ್ಲಾ ಕಡೆಗೂ ಪ್ರೈವೇಟ್ ಬಸ್ಸುಗಳ ವ್ಯವಸ್ಥೆ ಇದ್ದು, ಧರ್ಮಸ್ಥಳ ರಸ್ತೆಯಲ್ಲಿ ಮಾತ್ರ ಕೇವಲ ಕೆಎಸ್‌ಆರ್‌ಟಿಸಿ ಬಸ್ ಮಾತ್ರ ಓಡಾಡುತ್ತಿದೆ.

More articles

Latest article