ಮಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಪತ್ತೆಯಾದ ಅನುಮಾನಾಸ್ಪದ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂಬ ಮಾಹಿತಿ ಸಿಕ್ಕಿದೆ. ಇಂದು ಬೆಳಗ್ಗೆ ಟಿಕೆಟ್ ಕೌಂಟರ್ ಬಳಿ ಅನುಮಾನಾಸ್ಪದ ಬ್ಯಾಗ್‍ವೊಂದು ಪತ್ತೆಯಾಗಿದ್ದು, ಬ್ಯಾಗ್ ನೋಡಿದ ವ್ಯಕ್ತಿ ಕೂಡಲೇ ವಿಮಾನ ನಿಲ್ದಾಣದ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ತಕ್ಷಣ ಭದ್ರತಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಬಾಂಬ್ ನಿಷ್ಕ್ರಿಯ ದಳ ಏರ್‌ಪೋರ್ಟ್‌ಗೆ ದೌಡಾಯಿಸಿದೆ. ತಕ್ಷಣವೇ ಸಿಐಎಸ್‍ಎಫ್ ಸಿಬ್ಬಂದಿಗಳು ಅದನ್ನು ವಶಕ್ಕೆ ಪಡೆದು ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದರು.
ಆಟೋ ರಿಕ್ಷಾದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಬ್ಯಾಗ್ ಎಸೆದು ಹೋಗಿರುವುದಾಗಿ ಅನುಮಾನ ವ್ಯಕ್ತವಾಗಿದೆ. ಸುಮಾರು ಒಂದೂವರೆ ಕೆಜಿ ತೂಕದ ಟೈಮ್ ಬಾಂಬ್ ಪತ್ತೆಯಾಗಿದ್ದು, ಪೊಲೀಸರು ತಕ್ಷಣವೇ ಅದನ್ನು ನಿಷ್ಕ್ರಿಯಗೊಳಿಸುವ ಮೂಲಕ ಭಾರೀ ಅನಾಹುತ ತಪ್ಪಿಸಿದ್ದಾರೆ. ಗಣರಾಜ್ಯೋತ್ಸವದ ಸಮೀಪದಲ್ಲೇ ಸಜೀವ ಬಾಂಬ್ ಪತ್ತೆಯಾಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಬ್ಯಾಗ್‍ನಲ್ಲಿ ಸಜೀವ ಬಾಂಬ್ ಇರಬಹುದೆಂಬ ಶಂಕೆ ವ್ಯಕ್ತವಾಯಿತು. ಕೂಡಲೇ ಪೊಲೀಸರು ಮುನ್ನೆಚ್ಚರಿಕೆ ಕ್ರಮಕೈಗೊಂಡು ಅಲ್ಲಿಂದ ಜನರನ್ನು ದೂರ ಕಳುಹಿಸಿದರು. ಬ್ಯಾಗನ್ನು ಕಂಟ್ರೋಲ್ ಎಕ್ಸ್‍ಪೊಸಿವ್ ಡಿಫ್ಯೂಸ್ ಮಿಷನ್ ಒಳಗೆ ಹಾಕಲಾಯಿತು. ಮಿಷನ್ ಇದ್ದ ವಾಹನವನ್ನು ವಿವಿಐಪಿ ಕಾರು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಅದರ ಬಳಿ ಜನ ಹೋಗದಂತೆ ಎಚ್ಚರಿಕೆ ವಹಿಸಲಾಯಿತು. ನಂತರ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳಗಳು, ಮೆಟಲ್ ಡಿಟೆಕ್ಟರ್‍ಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದವು.
ಯಾವುದೇ ಅನಾಹುತಗಳಾಗದಂತೆ ಮಂಗಳೂರು ಪೊಲೀಸರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು. ವಿಮಾನ ನಿಲ್ದಾಣದ ಮಾರ್ಗದ ರಸ್ತೆಗಳ ಸಂಚಾರವನ್ನು ಬಂದ್ ಮಾಡಿ, ವಾಹನಗಳನ್ನು ಬದಲಿ ರಸ್ತೆಯಲ್ಲಿ ಕಳುಹಿಸಿದರು. ಬ್ಯಾಗ್‍ನಲ್ಲಿದ್ದುದು ಸ್ಫೋಟಕವೋ ಅಥವಾ ಬೇರೆ ವಸ್ತುವೋ ಎಂಬ ಬಗ್ಗೆ ಸಾಕಷ್ಟು ಗೊಂದಲಗಳು ಆರಂಭದಲ್ಲಿ ಕಾಡಿದವು. ಸಿಐಎಸ್‍ಎಫ್ ಸಿಬ್ಬಂದಿಗಳ ಪ್ರಕಾರ ಅದು ಸಜೀವ ಬಾಂಬ್ ಎಂಬ ಮಾಹಿತಿ ಇತ್ತು. ಬಾಂಬ್ ನಿಷ್ಕ್ರಿಯ ದಳದ ತಪಾಸಣೆ ನಂತರ ಅದು ಸಜೀವ ಬಾಂಬ್ ಎಂದು ಖಚಿತಪಟ್ಟಿದೆ.
ಟೈಮ್ ಬಾಂಬ್: ಬ್ಯಾಗ್‍ನಲ್ಲಿ ಸುಮಾರು ಒಂದೂವರೆ ಕೆಜಿ ತೂಕದ ಟೈಮ್ ಬಾಂಬ್ ಇದ್ದು, ಅದು ಸ್ಫೋಟಗೊಂಡರೆ ಸುಮಾರು 500 ಮೀಟರ್ ಅಂದಾಜು ಅರ್ಧ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಎಲ್ಲವೂ ಸುಟ್ಟು ಹೋಗುತ್ತಿತ್ತು ಎಂದು ಹೇಳಲಾಗಿದೆ. ಪೊಲೀಸರು ಮುನ್ನೆಚ್ಚರಿಕೆಯಾಗಿ ಅತ್ಯಂತ ಸೂಕ್ಷ್ಮ ಕಾರ್ಯಾಚರಣೆ ನಡೆಸಿ ಬಾಂಬ್‍ನ್ನು ನಿಷ್ಕ್ರಿಯಗೊಳಿಸಿದ್ದಾರೆ. ಒಂದು ವೇಳೆ ಟಿಕೆಟ್ ಕೌಂಟರ್ ಬಳಿ ಇದ್ದ ಟೈಮ್ ಬಾಂಬ್ ಸ್ಫೋಟಗೊಂಡಿದ್ದರೆ ಮಂಗಳೂರು ವಿಮಾನ ನಿಲ್ದಾಣ ಸಂಪೂರ್ಣವಾಗಿ ಸುಟ್ಟು ಕರಕಲಾಗುತ್ತಿದ್ದು, ಭಾರೀ ಪ್ರಮಾಣದ ಅನಾಹುತಗಳು, ಜೀವಹಾನಿ ಸಂಭವಿಸುವ ಸಾಧ್ಯತೆ ಇತ್ತು.
ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ಅವರು, ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದೆ. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ತಕ್ಷಣವೇ ವಿಷಯ ನಮ್ಮ ಗಮನಕ್ಕೆ ತಂದಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ ನಿಯಮಾನುಸಾರ ಪರಿಶೀಲನೆ ನಡೆಸಿದೆ ಎಂದು ತಿಳಿಸಿದರು. ಸಾರ್ವಜನಿಕರು ಯಾವುದೇ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಪೊಲೀಸರು ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದರು.
ಹೈ ಅಲರ್ಟ್: ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾದ ತಕ್ಷಣವೇ ರಾಜ್ಯದ ಇತರ ವಿಮಾನ ನಿಲ್ದಾಣಗಳಿಗೂ ಭದ್ರತೆ ಹೆಚ್ಚಿಸಲಾಯಿತು. ಮಂಗಳೂರು, ಬೆಂಗಳೂರು, ಮೈಸೂರು, ಕಲಬುರಗಿ, ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಯಿತು. ತಪಾಸಣಾ ಕಾರ್ಯಗಳನ್ನು ಬಿಗಿಗೊಳಿಸಲಾಗಿದ್ದು, ಅನುಮಾನಾಸ್ಪದ ವಸ್ತುಗಳು ಹಾಗೂ ವ್ಯಕ್ತಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಯಾಣಿಕರು ಪ್ರಯಾಣಿಸುವುದರಿಂದ ಸಣ್ಣಪುಟ್ಟ ಅವಘಡಗಳು ಕೂಡ ಭಾರೀ ಆತಂಕ ಸೃಷ್ಟಿಸುವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಉಡುಪಿಯ ಕೃಷ್ಣಮಠಕ್ಕೆ ಬಿಗಿಭದ್ರತೆ: ಮಂಗಳೂರು ವಿಮಾನ ನಿಲ್ದಾಣಕ್ಕೆ ಅನುಮಾನಾಸ್ಪದ ಬ್ಯಾಗನ್ನು ಆಟೋದಲ್ಲಿ ಬಂದ ಅಪರಿಚಿತರು ತಂದು ಇಟ್ಟು ಹೋಗಿರುವ ಮಾಹಿತಿ ಪತ್ತೆಯಾಗಿದೆ. ಅದರ ಬೆನ್ನು ಹತ್ತಿ ಕ್ಷಿಪ್ರ ತನಿಖೆ ನಡೆಸಿದ ಪೊಲೀಸರು, ಶಂಕಿತರು ಉಡುಪಿಯ ಕಡೆಗೆ ಪ್ರಯಾಣಿಸಿರುವ ಸಾಧ್ಯತೆಗಳು ಕಂಡು ಬಂದಿವೆ. ಕೂಡಲೇ ಉಡುಪಿಯ ಕೃಷ್ಣ ಮಠ ಹಾಗೂ ರೈಲ್ವೆ ನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.