ಬಂಟ್ವಾಳ: ಗಮಕ ಕಲೆಯನ್ನು ಶಾಲೆಯಲ್ಲಿ ಮಕ್ಕಳಿಗೆ ಕಲಿಸಿಕೊಡುವ ವ್ಯವಸ್ಥೆಯಾಗಬೇಕು. ಕನ್ನಡ ಭಾಷಾ ಶಿಕ್ಷಕರಿಗೆ ಸೂಕ್ತ ತರಬೇತಿಯನ್ನು ನೀಡುವ ಮೂಲಕ ಕಾವ್ಯ ವಾಚನ ಹಾಗೂ ವ್ಯಾಖ್ಯಾನ ಮಾಡುವ ಕಲೆಯನ್ನು ಉಳಿಸುವಂತಾಗಬೇಕು ಎಂದು ದ.ಕ. ಜಿಲ್ಲಾ ಗಮಕ ಕಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮೋಹನ ಕಲ್ಲೂರಾಯ ಹೇಳಿದರು.
ಅವರು ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗಮಕ ವಾಚನ ವ್ಯಾಖ್ಯಾನ ಸಪ್ತಾಹದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಉದ್ಘಾಟಿಸಿ ಮಾತನಾಡಿದರು. ಗಮಕ ಕಲೆಯ ಬಗ್ಗೆ ಆಸಕ್ತಿಯನ್ನು ಹುಟ್ಟಿಸುವುದಕ್ಕಾಗಿ ಗಮಕ ಸಪ್ತಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ. ಹಲವು ವಿದ್ವಾಂಸರು ಭಾಗವಹಿಸುತ್ತಿದ್ದಾರೆ. ಎಲ್ಲರ ಪ್ರೋತ್ಸಾಹ ಅಗತ್ಯವಾಗಿದೆ ಎಂದರು.
ಅತಿಥಿಗಳಾಗಿ ಶ್ರೀ ಆಂಜನೇಯ ಯಕ್ಷಗಾನ ಸಂಘ ಬೊಳ್ವಾರು ಪುತ್ತೂರು ಇದರ ಸಂಚಾಲಕ ಭಾಸ್ಕರ ಬಾರ್ಯ, ಸೀತಾರಾಮ ಶೆಟ್ಟಿ ಮಂಚಿ, ಸಾಹಿತ್ಯ ಪರಿಷತ್ತ್ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ಉಪಸ್ಥಿತರಿದ್ದರು.
ಡಾ. ಚೈತ್ರ ಸ್ವಾಗತಿಸಿ ಪ್ರಾರ್ಥನೆ ಗೈದರು. ತಿರುಮಲೇಶ್ ಭಟ್ ಕೈಯೂರು ಕಾರ್ಯಕ್ರಮ ನಿರೂಪಿಸಿದರು. ರಾಮಕೃಷ್ಣ ನಾಯಕ್ ಕೋಕಳ ವಂದಿಸಿದರು.
ಬಳಿಕ ಶ್ರೀ ಕೃಷ್ಣ ಲೀಲೆ ಕಥಾಭಾಗವನ್ನು ಆಧರಿಸಿ ಗಮಕ ವಾಚನ -ವ್ಯಾಖ್ಯಾನ ನಡೆಯಿತು. ಪ್ರೊ. ಮೋಹನ ಕಲ್ಲೂರಾಯ ವಾಚನ ನೆರವೇರಿಸಿ ಕೈಯೂರು ನಾರಾಯಣ ಭಟ್ ವ್ಯಾಖ್ಯಾನಿಸಿದರು.
ಜ.18 ರಂದು ಬಕಾಸುರ ವಧೆ, ಜ.19 ರಂದು ಸೌಗಂಧಿಕಾ, ಜ.20 ರಂದು ದತ್ತ ಜನನ, ಜ.21 ರಂದು ಕಾಳಿಂಗ ಮರ್ದನ, ಜ.22 ರಂದು ಭಕ್ತ ವತ್ಸಲ ಶ್ರೀಕೃಷ್ಣ, ಜ.23 ರಂದು ಶ್ರೀ ಕೃಷ್ಣ ಕಾರುಣ್ಯ ಕಾವ್ಯ ವಾಚನ-ಪ್ರವಚನ ನಡೆಯಲಿದೆ.
ರಾಮಕೃಷ್ಣ ಭಟ್ ಬಳಂಜ, ಉದಯ ಕುಮಾರ್ ಸುಬ್ರಮಣ್ಯ, ರೇಶ್ಮಾ ಗಿರೀಶ್ ಭಟ್, ಜಯಾನಂದ ಪೆರಾಜೆ, ಈಶ್ವರ ಭಟ್ ಗುಂಡ್ಯಡ್ಕ, ಮಧೂರು ರಾಮಪ್ರಕಾಶ್ ಕಲ್ಲೂರಾಯ ವ್ಯಾಖ್ಯಾನಕಾರರಾಗಿ ಭಾಗವಹಿಸಲಿದ್ದಾರೆ. ಕು.ಕೃತಿ, ಕುಮಾರ ನಿನಾದ, ಪ್ರತೀಕ್ಷಾ, ಸ್ವರ್ಣಲತಾ ಶೆಂಡ್ಯೆ, ಮಂಜುಳಾ ಸುಬ್ರಮಣ್ಯ ಭಟ್, ಡಾ.ವಾರಿಜಾ ನಿರ್ಬೈಲು, ಅಕ್ಷತಾ ನಿರ್ಬೈಲು, ಅಪೂರ್ವ ಗುಂಡ್ಯಡ್ಕ, ಸಣ್ಣಂಗುಳಿ ಶ್ರೀಕೃಷ್ಣ ಭಟ್ ಕಾವ್ಯ ವಾಚನ ಮಾಡಲಿರುವರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here