ಮಂಗಳೂರು: ಕಾರ್ಕಳ ಹಿರ್ಗಾನದ ಶ್ರೀ ಕುಂದೇಶ್ವರ ಕ್ಷೇತ್ರದಿಂದ ಕೊಡಮಾಡುವ “ಕುಂದೇಶ್ವರ ಸಮ್ಮಾನ್” ಪ್ರಶಸ್ತಿಗೆ ಈ ಬಾರಿ ಯಕ್ಷಗುರು ಕದ್ರಿ ರಾಮಚಂದ್ರ ಭಟ್ ಆಯ್ಕೆಯಾಗಿದ್ದಾರೆ.
ಜ.21ರಂದು ರಾತ್ರಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ‘ಭಾರ್ಗವ ವಿಜಯ’ ಯಕ್ಷಗಾನ ನಡೆಯಲಿದೆ. ಸಿಂಧೂರ ಕಲಾವಿದರಿಂದ ಪನೊಡಿತ್ತುಂಡು ತುಳು ನಾಟಕ ಪ್ರದರ್ಶನ ಗೊಳ್ಳಲಿದೆ. ಜ.22ರಂದು ವರ್ಷ್ಷಾವಧಿ ಮಹೋತ್ಸವ ನಡೆಯಲಿದೆ.
ಹಳ್ಳಿಯಿಂದ ದಿಲ್ಲಿ ವರೆಗೆ:
ಕದ್ರಿ ಪರಿಸರದ ಮಕ್ಕಳಲ್ಲಿ ಯಕ್ಷಗಾನದ ಆಸಕ್ತಿ ಮೂಡಿಸಿ ಪ್ರಬುದ್ಧ ಕಲಾವಿದರನ್ನಾಗಿ ರೂಪಿಸಿದ ಕೀರ್ತಿ ರಾಮಚಂದ್ರ ಭಟ್ಟರದ್ದು. ಬಾಲ, ಮಹಿಳಾ, ಯಕ್ಷಕೂಟದ ಸದಸ್ಯರು, ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡಿದ್ದಾರೆ. ಇಷ್ಟರ ಮಟ್ಟಿಗೆ ಪ್ರಬುದ್ಧ ಕಲಾವಿದರನ್ನು ರೂಪಿಸಿದ ಕೀರ್ತಿ ಎಲ್ಲೂರು ಅವರಿಗೆ ಸಲ್ಲುತ್ತದೆ.
ಶಿಷ್ಯರ ಉನ್ನತಿಯಲ್ಲಿಯೇ ಗುರುವಿನ ಯಶಸ್ಸು
ಶಿಷ್ಯರ ಯಶಸ್ಸಿನಲ್ಲಿಯೇ ತಮ್ಮ ಸಂತೋಷವನ್ನು ಕಾಣುವ ಅಪರೂಪದ ಗುರುಗಳ ಸಾಲಿನಲ್ಲಿ ಎಲ್ಲೂರು ಅಗ್ರಸ್ಥಾನದಲ್ಲಿ ಬರುತ್ತಾರೆ.
ಇವರ ಗರಡಿಯಲ್ಲಿ ಪಳಗಿದವರು ನಾಟಕ ತಂಡಗಳಲ್ಲಿ ಮಿಂಚುತ್ತಿದ್ದಾರೆ. ಶಿಷ್ಯ ಸೂರಜ್ ಕಾಮಿಡಿ ಕಿಲಾಡಿಗಳಲ್ಲಿ ತಮ್ಮ ಹಾಸ್ಯದ ಮೂಲಕ ರಾಜ್ಯದಲ್ಲಿಯೇ ಮನೆ ಮಾತಾಗಿದ್ದಾರೆ. ಮಗಳೂ ಆದ ಶಿಷ್ಯೆ ರಂಜಿತಾ ಎಲ್ಲೂರು ಯಕ್ಷರಂಗದ ಸವ್ಯ ಸಾಚಿ. ಇವರು ಪಡೆದ ಪ್ರಶಸ್ತಿ ಸನ್ಮಾನಗಳಿಗೆ ಲೆಕ್ಕ ಇಲ್ಲ.  ರಂಜಿತಾ ಜತೆ ಇನ್ನೊಬ್ಬ ಮಗಳು ರಕ್ಷಿತಾ ಎಲ್ಲೂರು ಅವರು, ಸೂರಿ ಕುಮೇರು ಗೋವಿಂದ ಭಟ್ಟರಂತಹ ಅಗ್ರಮಾನ್ಯ ಕಲಾವಿದರ ಜತೆ ವೇಷ ಹಾಕಿ ಅವರಿಂದಲೇ ಭೇಷ್ ಎನಿಸಿಕೊಂಡಿದ್ದಾರೆ.
ರಾಜ್ಯದ ಅನೇಕ ಕಡೆ, ಹೊರ ರಾಜ್ಯದಲ್ಲಿ ಎಲ್ಲೂರು ಅವರು ಯಕ್ಷಗಾನ ತರಬೇತಿ ನೀಡಿದ್ದಾರೆ. ಶಾಸ್ತ್ರೀಯ ತರಬೇತಿ ನೀಡುವುದು ವೈಶಿಷ್ಟ್ಯ. ಪರಂಪರೆಯ ಕುಣಿತಕ್ಕೆ ಪ್ರಾಧಾನ್ಯತೆ. ಅಭಿನಯದಲ್ಲೂ ನಾವಿನ್ಯತೆ, ಸೃಜನಶೀಲತೆಯನ್ನೂ ಅಳವಡಿಸಿ ಕೊಂಡವರು.

ಮನೆ- ಮನದಲ್ಲೂ ಯಕ್ಷಗಾನ
ಇವರ ಮನೆಯೇ ಯಕ್ಷಗಾನಮಯ. ಪತ್ನಿ ವನಿತಾ ಎಲ್ಲೂರು ಕೂಡಾ ಉತ್ತಮ ಯಕ್ಷಗಾನ ಕಲಾವಿದರು. ಅವರನ್ನು ರೂಪಿಸಿದ್ದು ರಾಮಚಂದ್ರ ಭಟ್ಟರೇ.
ಮಗಳು ರಕ್ಷಿತಾ ಎಲ್ಲೂರು ಪುಟಿದೇಳುವ ಪುಂಡುವೇಷ. ಇವರ ಶಿಷ್ಯರುಗಳಾದ ಪ್ರಕೃತಿ, ನಿಶಾ, ದುರ್ಗಾ, ರಿಶಿಕಾ ಕುಂದೇಶ್ವರ ಮೊದಲಾದವರಲ್ಲಿ ಯಾವ ವೇಷವನ್ನಾದರೂ  ಮಾಡುವ ಸಾಮರ್ಥ್ಯ ಇದೆ. ಎಲ್ಲ ಕಲಾ ಪ್ರಕಾರದಲ್ಲಿ ಶಿಷ್ಯರು ಎತ್ತಿದ ಕೈ.
ಇವರ ಶಿಷ್ಯ ಬಳಗದಲ್ಲಿ ಕಾರ್ಪೊರೇಟ್ ಸಂಸ್ಥೆಯ ಅಧಿಕಾರಿಗಳಿದ್ದಾರೆ, ಧರ್ಮಗುರುಗಳಿದ್ದಾರೆ, ಹಿರಿ, ಕಿರಿಯ ಪತ್ರಕರ್ತರಿದ್ದಾರೆ.
“ಎಲ್ಲೂರಿನ ಕೀರ್ತಿಯನ್ನು ಯಕ್ಷಗಾನ ರಂಗದಲ್ಲಿ ಹತ್ತೂರಿಗೆ ಹಬ್ಬಿಸಿದ್ದಾರೆ” ಎಂದು ಕುಂಬ್ಳೆ ಸುಂದರ ರಾಯರು ಎಲ್ಲೂರಿನ ಸಭೆಯೊಂದರಲ್ಲಿ ಉದ್ಘರಿಸಿದ್ದರು.
ಸಂಗೀತ:
ಕದ್ರಿಯ‌ ರಾಮಚಂದ್ರ ಭಟ್ ಎಲ್ಲೂರು ಅವರ ಮನೆಯಲ್ಲಿ ಯಕ್ಷಗಾನದ ಚೆಂಡೆ ಮದ್ದಳೆ, ಶಾಸ್ತ್ರೀಯ ಸಂಗಿತ, ಮೃದಂಗ, ಭಾಗವತಿಕೆ ತರಗತಿಗಳನ್ನು ಕೃಷ್ಣರಾಜ ನಂದಳಿಕೆ ಮಾಡುತ್ತಿದ್ದಾರೆ. ಇದಕ್ಕೆ ಎಲ್ಲೂರು ಅವರು  ಉಚಿತ ಸ್ಥಳಾವಕಾಶ ಒದಗಿಸಿದ್ದಾರೆ.
ಇಂಥ ಅಪರೂಪದ ಕಲಾರಾಧಕರಿಗೆ ಅರ್ಹವಾಗಿಯೇ ಕಾರ್ಕಳ ಹಿರ್ಗಾನ ಕುಂದೇಶ್ವರ ದೇವಸ್ಥಾನ ಕೊಡಮಾಡುವ ಶ್ರೀಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಸಂದಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here