ಕಲ್ಲಡ್ಕ: ನೇತಾಜಿ ಎಂದೇ ಪ್ರಸಿದ್ಧರಾದ ಸುಭಾಶ್ ಚಂದ್ರ ಬೋಸ್ ’ಭಾರತದ ಸ್ವಾತಂತ್ರ್ಯ ಸಂಗ್ರಾಮ’ದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು. ಅವರು ರೂಪಿಸಿದ ಹಲವು ಘೋಷಣೆಗಳಾದ ’ಜೈಹಿಂದ್’, ’ಇನ್‌ಕ್ವಿಲಾಬ್ ಜಿಂದಾಬಾದ್’ ನಮ್ಮನ್ನು ರೋಮಾಂಚನಗೊಳಿಸುತ್ತದೆ. ಅವರು ಭಾರತದ ಮಹಾನ್ ವ್ಯಕ್ತಿಯಾಗಿದ್ದರು. ತಾನು ಕಷ್ಟಪಟ್ಟು ಗಳಿಸಿದ್ದ ಐ.ಪಿ.ಎಸ್. ಪದವಿಯನ್ನೇ ತಿರಸ್ಕರಿಸಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದ ಬೋಸ್‌ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರ ಹಿತಕ್ಕೆ ದಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲ ನೀತಿ ಹೊಂದಿರಬಾರದೆಂಬ ಸುಭಾಷ್‌ರ ದಿಟ್ಟ ನಿಲುವಿನ ಪ್ರತಿಧ್ವನಿಯಾಗಿತ್ತು. ಈ ದೇಶದ ಮುಂದಿನ ಪ್ರಜೆಗಳಾದ ನೀವು ಅವರ ಆದರ್ಶಗಳನ್ನು ಪಾಲಿಸಿ ಉತ್ತುಂಗಕ್ಕೆ ಏರಿ ಯಶಸ್ಸು ಕಾಣಬೇಕು ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯ ಹಾಗೂ ನೇತಾಜಿ ಯುವಕ ಮಂಡಲದ ಗೌರವಾಧ್ಯಕ್ಷ ಆಗಿರುವಂತಹ ನಾಗೇಶ್ ಅವರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.


ಜ. 23 ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ ಜನ್ಮದಿನವನ್ನು ಆಚರಿಸಲಾಯಿತು. ಆ ಪ್ರಯುಕ್ತ ನೇತಾಜಿಯವರು ಇಷ್ಟಪಡುತ್ತಿದ್ದ ಸ್ವದೇಶಿ ಆಟಗಳನ್ನು ಆಡಿಸಲಾಯಿತು.
ನನಗೆ ರಕ್ತವನ್ನು ಕೊಡಿ ನಾನು ಸ್ವಾತಂತ್ರ್ಯವನ್ನು ಕೊಡುತ್ತೇನೆ ಎಂದು ಗರ್ಜಿಸಿದ ಬಂಗಾಲದ ಹುಲಿ, ಅಖಂಡ ದೇಶಬಕ್ತ, ಸ್ವಾತಂತ್ರ್ಯ ಸೇನಾನಿ ನೇತಾಜಿ ಅವರ ಮಾತುಗಳನ್ನು ನೆನಪಿಸುತ್ತಾ, ನೇತಾಜಿಯವರು ಸ್ವದೇಶಿ ಆಟಗಳನ್ನು ಇಷ್ಟಪಡುತ್ತಿದ್ದರು. ಹಾಗೆಯೇ ನಾವು ಕೂಡ ಸ್ವದೇಶಿ ಆಟ ಹಾಗೂ ಸ್ವದೇಶಿ ಉತ್ಪನ್ನಗಳನ್ನು ಬಳಸಬೇಕು. ಭಾರತೀಯ ಸಂಸ್ಕೃತಿಯನ್ನು ಉಳಿಸಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಅವರು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆಯ ನಂತರ ನೇತಾಜಿಯವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆ ಮಾಡಿದರು. ನಂತರ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿದರು. 7ನೇ ತರಗತಿಯ ವಿದ್ಯಾರ್ಥಿನಿಗಳು ಸಾಮೂಹಿಕ ಗೀತೆ ಹಾಡಿದರು.


ಮಕ್ಕಳನ್ನು ಹಾಳೆಯಲ್ಲಿ ಕುಳ್ಳಿರಿಸಿ, ಅದನ್ನು ಅತಿಥಿಗಳು ಎಳೆಯುವುದರ ಮೂಲಕ ಸ್ವದೇಶಿಯ ಆಟಗಳಿಗೆ ಚಾಲನೆ ನೀಡಲಾಯಿತು. ನಂತರ ಮಕ್ಕಳಿಂದ ಹುಲಿ-ದನ ಆಟ, ವಿದ್ಯುತ್ ಸಂಚಾರ ಆಟ, ಕೆರೆ-ದಡ ಆಟ, ವಿಷ-ಅಮೃತ, ಕೊಕ್ಕರೆ-ಕೋಳಿ, ಸೊಪ್ಪಾಟ, ಉಪ್ಪುಮೂಟೆ, ಚಕ್ರವ್ಯೂಹ, ಟೋಪಿ ಆಟ, ಆನೆ ಸೊಂಡಿಲು ಹಾಗೂ ಕನ್ನಡಿ ಆಟಗಳೆಂಬ ದೇಶಿಯ ಆಟಗಳನ್ನು ಆಡಿಸಲಾಯಿತು.


ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀರಾಮ ಆಡಳಿತ ಮಂಡಳಿಯ ಸದಸ್ಯೆ ಮಾತೃ ಸ್ವರೂಪಿಯಾದ ಕಮಲಾ ಪ್ರಭಾಕರ್ ಭಟ್, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ವಸಂತಿ, ಶಿಶುಮಂದಿರದ ಪ್ರಮುಖರಾದ ಭ|ಗಂಗಾ ಹಾಗೂ ಶಾಲಾ ಮೂಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಅಧ್ಯಾಪಕರಾದ ಸವಿತಾ ಸ್ವಾಗತಿಸಿ, ದಿವ್ಯ ವಂದಿಸಿದರು. ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here