ಬಂಟ್ವಾಳ: ಮನೆಯಲ್ಲಿ ಯಾರೂ ಇಲ್ಲದೆ ವೇಳೆಗೆ ಮುಂಬಾಗಿಲ ಮೂಲಕ ನುಗ್ಗಿ ಕಪಾಟಿನಲ್ಲಿದ್ದ ಬೆಳ್ಳಿಯ ಸಾಮಾಗ್ರಿಗಳು ಹಾಗೂ ನಗದನ್ನು ಕಳ್ಳರು ದೋಚಿದ ಘಟನೆ ನಿನ್ನೆ ಬಿ.ಸಿ.ರೋಡು ಕೈಕುಂಜೆಯಲ್ಲಿ ನಡೆದಿದೆ.
ಕೈಕುಂಜೆಯ ನಿವಾಸಿ ಶ್ರೀಹರಿ ಎಳಚಿತ್ತಾಯ ಅವರು ತಮ್ಮ ಪತ್ನಿಯ ಜತೆಗೆ ಬಿ.ಸಿ.ರೋಡಿಗೆ ತೆರಳಿದ್ದ ವೇಳೆ ಅವರ ಮನೆಯಲ್ಲಿ ಕಳವಿನ ಘಟನೆ ನಡೆದಿದ್ದು, ಕಪಾಟಿನ ಒಳಗೆ ಪ್ಲಾಸ್ಟಿಕ್ ಕವರಿನಲ್ಲಿದ್ದ ಬೆಳ್ಳಿಯ ಸಾಮಾಗ್ರಿಗಳಾದ ತಂಬಿಗೆ, ದೀಪಗಳು, ಬಟ್ಟಲುಗಳು, ಜಪ ಮಾಡುವ ಸಾಮಾಗ್ರಿಗಳು, ಆರತಿ ತಟ್ಟೆಗಳು ಹಾಗೂ ರೂಮಿನಲ್ಲಿದ್ದ ಕಬ್ಬಿಣದ ಕಪಾಟಿನಲ್ಲಿಟ್ಟಿದ್ದ ನಗದನ್ನು ಕಳ್ಳರು ದೋಚಿದ್ದಾರೆ ಎಂದು ಶ್ರೀಹರಿ ಅವರ ಪತ್ನಿ ಶಾರದಾ ಕೆ. ದೂರಿನಲ್ಲಿ ತಿಳಿಸಿದ್ದಾರೆ.
ಕಳವಾದ ಬೆಳ್ಳಿಯ ಸಾಮಗ್ರಿಗಳು ಮತ್ತು ನಗದಿನ ಒಟ್ಟು ಮೌಲ್ಯ ಸುಮಾರು 24,500 ರೂ.ಗಳೆಂದು ಅಂದಾಜಿಸಲಾಗಿದ್ದು, ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.