ಮಂಗಳೂರು: ಏಪ್ರಿಲ್ 1ರಿಂದ ಮನೆ ಸಮೀಕ್ಷೆ ಪ್ರಾರಂಭವಾಗಲಿದ್ದು, ನೀವು ಯಾವೆಲ್ಲಾ ವಿವರಗಳನ್ನು ನೀಡ್ಬೇಕು ಎಂಬ ಮಾಹಿತಿ ಇಲ್ಲಿದೆ. ಪೌರತ್ವ ಮಸೂದೆ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಬಗ್ಗೆ ದೇಶವ್ಯಾಪಿ ಹೋರಾಟ ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಏಪ್ರಿಲ್ 1ರಿಂದ ದೇಶವ್ಯಾಪಿ ಮನೆ ಗಣತಿಗೆ ಗುರುವಾರ ಅಧಿಸೂಚನೆ ಹೊರಡಿಸಿದೆ.
ಮನೆಗೆ ಭೇಟಿ ನೀಡಲಿರುವ ಗಣತಿದಾರರು, ಮನೆಯ ಯಜಮಾನರ ಮೊಬೈಲ್ ನಂಬರ್‍ ಸೇರಿದಂತೆ ಒಟ್ಟು 31 ಬಗೆಯ ಮಾಹಿತಿಗಳನ್ನು ಪಡೆದುಕೊಳ್ಳಲಿದ್ದಾರೆ.
ನೀವು ನೀಡಬೇಕಾದ ಮಾಹಿತಿಯ ವಿವರ:
ಮನೆ ಮಾಲಿಕರ ಮೊಬೈಲ್ ನಂಬರ್ ಸೇರಿದಂತೆ ಮನೆಯಲ್ಲಿರುವ ಶೌಚಾಲಯ, ಸ್ನಾನ ಗೃಹ, ತ್ಯಾಜ್ಯ ನಿರ್ವಹಣೆ, ಟಿವಿ, ಮೊಬೈಲ್, ರೇಡಿಯೋ, ಲ್ಯಾಪ್‌ಟಾಪ್, ಕಂಪ್ಯೂಟರ್, ಸೈಕಲ್, ವಾಹನಗಳ ನೋಂದಣಿ ಸಂಖ್ಯೆ, ಮನೆ ನಂಬರ್, ಮನೆಯಲ್ಲಿರುವ ಸದಸ್ಯರ ಸಂಖ್ಯೆ, ವಿವಾಹಿತರ ಸಂಖ್ಯೆ, ಅಡುಗೆ ಮನೆ ನೆಲದ ವಿಧ, ಮನೆಯ ಸ್ಥಿತಿ, ವಿದ್ಯುತ್ ಸೌಲಭ್ಯ ಜಾತಿ, ಕುಡಿಯುವ ನೀರಿನ ಮೂಲಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ಬಗ್ಗೆ ಅಧಿಸೂಚನೆ ಹೊರಡಿಸಿರುವ ರಿಜಿಸ್ಟ್ರಾರ್ ಜನರಲ್ ಮತ್ತು ಗಣತಿ ಆಯುಕ್ತರು, ಗಣತಿ ಅಧಿಕಾರಿಗಳು ಏಪ್ರಿಲ್ 1ರಿಂದ ಸೆಪ್ಟೆಂಬರ್ ವರೆಗೆ ದೇಶದೆಲ್ಲೆಡೆ ಮನೆಗಣತಿ ಮಾಡಲಿದ್ದಾರೆ.
2021ರಲ್ಲಿ ನಡೆಸಲು ಉದ್ದೇಶಿರುವ ಜನಗಣತಿಗೆ ಪೂರ್ವವಾಗಿ ಸರ್ಕಾರ ಈ ಮನೆ ಗಣತಿ ನಡೆಸುತ್ತಿದೆ. ಇದರಲ್ಲಿ ಮನೆಯ ಯಜಮಾನರ ಮೊಬೈಲ್ ನಂಬರ್ ಸೇರಿ ವಿವಿಧ ರೀತಿಯ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಜನಗಣತಿ ಸಂಬಂಧ ಮಾಹಿತಿ ಹಂಚಿಕೊಳ್ಳಲು ಮಾತ್ರ ಮೊಬೈಲ್ ನಂಬರ್ ಉಪಯೋಗಿಸಿಕೊಳ್ಳಲಾಗುತ್ತದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here