ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಹಾಗೂ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ಹೊಸ ವರ್ಷ ಶುಭಾರಂಭದ ದಿನವಾದ ಬುಧವಾರ ನಾಡಿನೆಲ್ಲೆಡೆಯಿಂದ ಸುಮಾರು ಐವತ್ತು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ದೇವರ ದರ್ಶನ ಪಡೆದು ಸೇವೆ ಸಲ್ಲಿಸಿದರು.
ಹಲವು ಮಂದಿ ಪಾದಯಾತ್ರೆಯಲ್ಲಿ ಬಂದರೆ, ಕೆಲವರು ಸೈಕಲ್ ಮೂಲಕ ಧರ್ಮಸ್ಥಳಕ್ಕೆ ಬಂದು ತಮ್ಮ ಸೇವೆ ಸಲ್ಲಿಸಿದ್ದಾರೆ.
ಅನೇಕ ಮಂದಿ ಮುಡಿ ಅರ್ಪಿಸಿ (ತಲೆಕೂದಲು ತೆಗೆಸಿ) ನೇತ್ರಾವತಿ ನದಿಯಲ್ಲಿ ಪುಣ್ಯಸ್ನಾನ ಮಾಡಿದರು. ದೇವರ ದರ್ಶನದ ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಮಂಜೂಷಾ ವಸ್ತು ಸಂಗ್ರಹಾಲಯ, ಕಾರ್ ಮ್ಯೂಸಿಯಂ, ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ ವೀಕ್ಷಿಸಿ ತಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿಕೊಂಡರು.
ಬೆಂಗಳೂರಿನ ಭಕ್ತಾದಿಗಳಿಂದ ಪುಷ್ಪಾಲಂಕಾರ ಸೇವೆ:
ಬೆಂಗಳೂರಿನ ಚಂದ್ರಾ ಲೇಔಟ್ ನಿವಾಸಿಗಳಾದ ಸಾಯಿ ಸರವಣ, ಗೋಪಾಲ ರಾವ್, ಆನಂದ, ಮಂಜುನಾಥ ರಾವ್, ಧರ್ಮಸ್ಥಳಕ್ಕೆ ಮಂಗಳವಾರವೇ ಬಂದು ದೇವಸ್ಥಾನ ಮತ್ತು ಹೆಗ್ಗಡೆಯವರ ಬೀಡು (ನಿವಾಸ) ಹಾಗೂ ಇತರ ಕಟ್ಟಡಗಳನ್ನು ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿದ್ದಾರೆ.
ಭತ್ತದ ತೆನೆ, ಕಬ್ಬು, ದಾಳಿಂಬೆ, ಬಾಳೆ ದಿಂಡು, ತೆಂಗಿನಗರಿ, ತಾವರೆ, ಲಿಲಿಯಂ, ಆಂತೂರಿಯಂ, ಜಮೈಕಾನ್ ಎಲೆ ಸೇರಿದಂತೆ ಆರು ಲೋಡ್ ಪರಿಸರ ಸ್ನೇಹಿ ಅಲಂಕಾರಿಕ ಪರಿಕರಗಳನ್ನು ಬಳಸಿ ಆಕರ್ಷಕವಾಗಿ ಸಿಂಗರಿಸಿ ಸೇವೆ ಮಾಡಿ ಧನ್ಯತೆಯನ್ನು ಹೊಂದಿದ್ದಾರೆ.
ಕಳೆದ 12 ವರ್ಷಗಳಿಂದ ಪ್ರತಿ ವರ್ಷ ಹೊಸವರ್ಷ ಶುಭಾರಂಭದ ದಿನ ತಾವು ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಬಂದು ಅಲಂಕಾರ ಸೇವೆ ಮಾಡುತ್ತಿದ್ದು, ತಮ್ಮ ವ್ಯವಹಾರದಲ್ಲಿ ಅಭಿವೃದ್ಧಿಯಾಗಿ, ಶಾಂತಿ, ನೆಮ್ಮದಿ ದೊರಕುತ್ತದೆ ಎಂದು ಸೇವಾಕರ್ತರ ತಂಡದ ನಾಯಕ ಎಸ್. ಗೋಪಾಲ ರಾವ್ ತಿಳಿಸಿದ್ದಾರೆ.