ಬಂಟ್ವಾಳ: ದ್ವಿಚಕ್ರ ವಾಹನಗಳ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಸವಾರಿಬ್ಬರು ಮೃತಪಟ್ಟು, ಸಹಸವಾರೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಾಣಿ ಸಮೀಪದ ಕೊಡಾಜೆ ಎಂಬಲ್ಲಿ ಮಂಗಳವಾರ ಸಂಭವಿಸಿದೆ. ಕಲ್ಲಡ್ಕ ಶಾಲಾಬಳಿ ನಿವಾಸಿ ಕರೀಂ ಎಂಬವರ ಪುತ್ರ ಮುಹಮ್ಮದ್ ಅಜ್ಮಲ್(19), ಮಾಣಿ ಬರೆನೆಕ್ಕರೆ ನಿವಾಸಿ ಮೋನಪ್ಪ ಪೂಜಾರಿ ಎಂಬವರ ಪುತ್ರ ಪರೀಕ್ಷಿತ್ (19) ಮೃತಪಟ್ಟ ದ್ವಿಚಕ್ರ ವಾಹನ ಸವಾರರಾಗಿದ್ದು, ಸ್ಥಳೀಯ ನಿವಾಸಿ, ಸಹಸವಾರ ಪದ್ಮನಾಭ ಗೌಡ (28) ಎಂಬವರು ಗಂಭೀರ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಘಟನೆ: ಪರೀಕ್ಷಿತ್ ಹಾಗೂ ಪದ್ಮನಾಭ ಗೌಡ ಎಂಬವರು ಬೈಕ್ ನಲ್ಲಿ ಮಾಣಿ ಕಡೆಗೆ ತೆರಳಿದ್ದು, ಅಜ್ಮಲ್ ಅವರು ಆಕ್ಟೀವದಲ್ಲಿ ಕೊಡಾಜೆ ಕಡೆಗೆ ಹೋಗುತ್ತಿದ್ದಾಗ ಪೆರಾಜೆಯ ಮಠ ಎಂಬಲ್ಲಿ ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಘಟನೆಯಿಂದ ದ್ವಿಚಕ್ರ ವಾಹನ ಸವಾರಿಬ್ಬರಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ದ್ವಿಚಕ್ರ ವಾಹನಗಳೆರಡೂ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.