ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ರೆಡ್‌ಕ್ರಾಸ್ ಘಟಕ, ಹಿರಿಯ ವಿದ್ಯಾರ್ಥಿ ಸಂಘ, ಪ್ರಣವ ವಿದ್ಯಾರ್ಥಿ ಸಂಘ ಹಾಗೂ ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಇದರ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನದ ಪ್ರಯುಕ್ತ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶರತ್ ಕುಮಾರ್ ರಾವ್ ಉದ್ಘಾಟಿಸಿ, ರಕ್ತದಾನ ಒಂದು ಜೀವಿಯನ್ನು ಉಳಿಸುವ ಶ್ರೇಷ್ಠ ದಾನ. ರಾಷ್ಟ್ರೀಯ ಯುವ ದಿನದ ಪ್ರಯುಕ್ರ ರಕ್ತದಾನ ಶಿಬಿರ ಒಂದು ಒಳ್ಳೆಯ ಬೆಳವಣಿಗೆ. ರಕ್ತದಾನದ ಮೂಲ ಚಿಂತನೆಗೆ ಪ್ರೇರಣಾ ಶಕ್ತಿ ವಿವೇಕಾನಂದರು. ಯುವಕರು ಸಮಾಜ ಮುಖಿ ಚಿಂತನೆಗಳನ್ನು ಬೆಳೆಸಿ ರಕ್ತದಾನ ಮಾಡಿದರೆ ಮಾತ್ರ ವಿವೇಕಾನಂದರು ಕಂಡ ಆದರ್ಶ ಭಾರತ ಸಾಕಾರವಾಗಲು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಶ್ರೀರಾಮ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷ ಕುಲ್ಯಾರು ನಾರಾಯಣ ಶೆಟ್ಟಿ, ನ್ಯಾಯವಾದಿ ಶಿವಗಿರಿ ಸತೀಶ್ ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಜಯಪ್ರಶಾಂತ್ ಹಾಗೂ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 81 ಮಂದಿ ರಕ್ತದಾನ ಮಾಡಿದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಲತಾಶ್ರೀ ಸ್ವಾಗತಿಸಿ, ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ವಂದಿಸಿದರು. ಅನಿತಾ ಕಾರ್ಯಕ್ರಮ ನಿರೂಪಿಸಿದರು.