ಬಂಟ್ವಾಳ: ಸಂಚಾರ ನಿಯಮ ಪಾಲನೆ, ಅಪಘಾತ ತಡೆಯ ಹಿನ್ನೆಲೆಯಲ್ಲಿ ಬಂಟ್ವಾಳ ಪೊಲೀಸ್ ಇಲಾಖೆಗೆ ಸರಕಾರ ನೀಡಿದ ಮೂರು ಹೈವೇ ಪ್ಯಾಟ್ರೋಲ್ ವಾಹನಗಳನ್ನು ಶುಕ್ರವಾರ ಬಿ.ಸಿ.ರೋಡ್ ಜಂಕ್ಷನ್‌ನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕಾರ್ಯಾಚರಣೆಗೆ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸರಕಾರ ಸುಸಜ್ಜಿತ ವಾಹನಗಳನ್ನು ನೀಡಿದೆ. ಈ ವಾಹನಗಳ ಸಹಾಯದಿಂದ ಪೊಲೀಸ್ ಇಲಾಖೆ ಜನರಿಗೆ ಉತ್ತಮ ಸೇವೆ ನೀಡಬೇಕಿದೆ. ಜತೆಗೆ ಕಾನೂನು ಮೀರಿದವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೂ ಇದು ಅನುಕೂಲವಾಗಲಿದೆ ಎಂದು ತಿಳಿಸಿದರು.
ಶಾಸಕರು ಮೂರು ವಾಹನಗಳ ಚಾಲಕರಿಗೆ ಗುಲಾಬಿ ಹೂವುಗಳನ್ನು ಹಸ್ತಾಂತರಿಸಿದರು. ರಸ್ತೆ ಸುರಕ್ಷತಾ ಸಪ್ತಾಹದ ಹಿನ್ನೆಲೆಯಲ್ಲಿ ಎಸ್‌ವಿಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾ ಅವರು ಶಾಸಕರನ್ನು ಸ್ವಾಗತಿಸಿದರು. ಬಂಟ್ವಾಳ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್, ಬಂಟ್ವಾಳ ನಗರ ಠಾಣಾ ಪಿಎಸ್‌ಐ ಅವಿನಾಶ್, ಗ್ರಾಮಾಂತರ ಠಾಣಾ ಪಿಎಸ್‌ಐ ಪ್ರಸನ್ನ ಎಂ.ಎಸ್, ಸಂಚಾರಿ ಠಾಣಾ ಪಿಎಸ್‌ಐ ರಾಮ ನಾಯ್ಕ್ ಹಾಗೂ ಇತರ ಸಿಬಂದಿ ಉಪಸ್ಥಿತರಿದ್ದರು