ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಶನಿವಾರ ಪ್ರಕಟವಾಗಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂವರು ಸಾಧಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜ.26ರಂದು ಮಂಗಳೂರಿನಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನ. 1ರಂದು ನೀಡಬೇಕಿದ್ದರೂ, ಕಳೆದ ನವೆಂಬರ್ನಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಪ್ರಶಸ್ತಿ ವಿತರಣೆಯಾಗಿರಲಿಲ್ಲ.
ಪ್ರಸ್ತುತ ಬಂಟ್ವಾಳ ಕ್ಷೇತ್ರದ ಹಿರಿಯ ನಾಟಕ ಕಲಾವಿದ ಎಚ್ಕೆ ನಾಯನಾಡು, ಕೋಳಿ ನೃತ್ಯ ಖ್ಯಾತಿಯ ಅಶೋಕ್ ಪೊಳಲಿ ಹಾಗೂ ನಾಗಸ್ವರ ವಾದಕ ಪ್ರಶಾಂತ್ ಜೋಗಿ ಅವರು ಆಯ್ಕೆಯಾಗಿದ್ದಾರೆ.
ಎಚ್ಕೆ ನಾಯನಾಡು
ರಂಗನಿರ್ದೇಶಕ, ಸಾಹಿತಿ, ಉದ್ಘೋಷಕ ಎಚ್ಕೆ ನಯನಾಡು ಅವರು ತಾಲೂಕಿನ ಮಣಿಹಳ್ಳ ಪಣೆಕಲಪಡ್ಪುನಲ್ಲಿ ನೆಲೆಸಿದ್ದಾರೆ. ನಾಟಕ ರಚನೆಗಾರರಾಗಿ, ನಟರಾಗಿ,ನಿರ್ದೇಶಕರಾಗಿ, ಕವಿಯಾಗಿ, ಸಂಘಟಕರಾಗಿ, ಸಾಹಿತಿಯಾಗಿ, ಚಲನಚಿತ್ರ ಕಲಾವಿದರಾಗಿ, ಸಂಘಟಕರಾಗಿ, ಸಾಮಾಜಿಕ/ ಸಾಹಿತ್ಯ/ ಕಲೆ/ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.
ಅಶೋಕ್ ಪೊಳಲಿ
ಕೋಳಿ ನೃತ್ಯದ ಮೂಲಕ ಹೆಸರು ಮಾಡಿರುವ ಅಶೋಕ್ ಪೊಳಲಿಯವರು ಕರಿಯಂಗಳ ಗ್ರಾಮದ ಪಡ್ಪು ಮನೆ ನಿವಾಸಿಯಾಗಿದ್ದಾರೆ. ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡುವ ಮೂಲಕ ಖ್ಯಾತಿ ಗಳಿಸಿದ್ದು, ಹಲವಾರು ಪ್ರತಿಷ್ಠಿತ ಟಿವೆ ಚಾನೆಲ್ಗಳಲ್ಲೂ ತನ್ನ ಕಲಾ ಪ್ರದರ್ಶನದ ಮೂಲಕ ಮೆಚ್ಚುಗೆ ಗಳಿಸಿದ್ದರು.
ಪ್ರಶಾಂತ್ ಜೋಗಿ ಮಿತ್ತಕೆರೆ
ಜಿಲ್ಲೆಯ ವಿವಿಧ ಧಾರ್ಮಿಕ ಕ್ಷೇತ್ರಗಳ ನಾಗಸ್ವರ ವಾದಕರಾಗಿರುವ ಪ್ರಶಾಂತ್ ಜೋಗಿ ಮಿತ್ತಕೆರೆ ಅವರು ಸಜೀಪಮೂಡ ಗ್ರಾಮದ ಮಿತ್ತಕೆರೆ ನಿವಾಸಿಯಾಗಿದ್ದಾರೆ. ಸುಮಾರು 25 ದೇವಸ್ಥಾನಗಳು, 30 ದೈವಸ್ಥಾನಗಳಲ್ಲಿ ನಾಗಸ್ವರ ವಾದಕರಾಗಿ ಖ್ಯಾತಿ ಪಡೆದಿದ್ದಾರೆ.