ಸಿ.ಎ.ಎ. ವಿರುದ್ದ ಪ್ರತಿಭಟನೆ ಸಂಬಂಧಿಸಿದ ಸಾರ್ವಜನಿಕ ಸಭೆಗಳಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮುಗ್ಧ ಜನರನ್ನು ದಿಕ್ಕು ತಪ್ಪಿಸುವ, ಕಲಹಕ್ಕೆ ಪ್ರಚೋದನೆ ನೀಡುವಂತಹ ಭಾಷಣದ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಠಿಸಲು ದಕ್ಷಿಣ ಕನ್ನಡ ಜಿಲ್ಲೆಯ ನಿವೃತ್ತ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಯತ್ನಿಸುತ್ತಿದ್ದಾರೆ,ತಾನೊಬ್ಬ ಸ್ವಯಂ ನಿವೃತ್ತ ಐ.ಎ.ಎಸ್. ಅಧಿಕಾರಿ, ತಾನೇ ಇಡೀ ರಾಷ್ಟ್ರದ ಅತೀ ಬುದ್ದಿವಂತರಲ್ಲಿ ಓರ್ವ ಶ್ರೇಷ್ಟ ವ್ಯಕ್ತಿ ಎಂಬಂತೆ ವರ್ತಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕದ ಪರಿಸ್ಥಿತಿ ಹುಟ್ಟುಹಾಕಿದೆ ಎಂದು ಪ್ರಭು ಮನವಿಯಲ್ಲಿ ಆರೋಪಿಸಿದ್ದಾರೆ.
ಎನ್.ಆರ್.ಸಿ.ಮತ್ತು ಎನ್.ಪಿ.ಆರ್ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕರ ಮನೆಗೆ ಗಣತಿಗೆ ಬಂದರೆ ಮಾಹಿತಿ ನೀಡದೇ ಒಂದು ಕಫ್ ಟೀ ಕೊಟ್ಟು ವಾಪಾಸು ಕಳುಹಿಸಿ ಎಂದು ಫರ್ಮಾನು ಹೊರಡಿಸುವ ಮಂಗಳೂರಿನ ನಿವೃತ್ತ ಜಿಲ್ಲಾಧಿಕಾರಿಯ ಈ ಹೇಳಿಕೆ ಇಡೀ ಕಾರ್ಯಾಂಗ ವ್ಯವಸ್ಥೆಯೇ ತಲೆ ತಗ್ಗಿಸುವಂತಾಗಿದೆ ಎಂದು ಅವರು ವಿವರಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ದ ಮಂಗಳೂರಿನಲ್ಲಿ ಈಚೆಗೆ ನಡೆಸಿದ ಪ್ರತಿಭಟನಾಕಾರರ ರಂಪಾಟ ಗಂಬೀರ ಸ್ವರೂಪ ಪಡೆದುಕೊಂಡಾಗ ಪೋಲೀಸರು ನಡೆಸಿದ ಅಶ್ರುವಾಯು, ಗೋಲಿಬಾರ್ ಕ್ರಮ ತಪ್ಪು ಹಾಗೂ ಪ್ರತಿಭಟನಾಕಾರರನ್ನು ಕಂಟ್ರೋಲ್ ಮಾಡದ ಪೋಲೀಸ್ ಏಕೆ ಬೇಕು? ಎಂದು ಅವರು ಪ್ರಶ್ನಿಸಿರುವುದು ಇಡೀ ಪೋಲೀಸ್ ಇಲಾಖೆಯನ್ನು ನಿಂದಿಸುವಂತಾಗಿದ್ದು ತಾನೊಬ್ಬ ಹಿಂದಿನ ಜಿಲ್ಲಾಧಿಕಾರಿ ಎಂಬುದನ್ನು ಮರೆತಂತಾಗಿದೆ ಎಂದು ಪ್ರಭು ದೂರಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಗಳೂರಿನಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ರಾಜಕೀಯ ಪಕ್ಷದ ಏಜೆಂಟರಂತೆ ವರ್ತಿಸಿ, ಸಿಎಎ ವಿರುದ್ದ ಪ್ರತಿಭಟನೆ ಸಂದರ್ಭ ನಡೆದ ಗೋಲಿಬಾರ್ ಗೆ ಕರ್ನಾಟಕ ರಾಜ್ಯ ಸರಕಾರ ನೇರ ಹೊಣೆ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ದ ಸೆಂಥಿಲ್ ಟೀಕೆ ಮಾಡುತ್ತಿರುವುದು ರಾಷ್ಟ್ರ ದ್ರೋಹ ಎಂದೆನಿಸಿದೆ ಎಂದು ಮನವಿಯಲ್ಲಿ ಅಪಾದಿಸಿದ್ದಾರೆ.
ಸಿಎಎ ಜಾರಿಯಿಂದ ದೇಶ ವಿಭಜನೆಯಾಗುತ್ತದೆ. ಬಡವರಿಗೆ, ಮಧ್ಯಮ ವರ್ಗದವರಿಗೆ ಅನ್ಯಾಯವಾಗುತ್ತಿದೆ. ಭಾರತಕ್ಕೆ ಮಸೂದೆ ಅಗತ್ಯವಿರುವುದಿಲ್ಲ ಎಂಬ ಹೇಳಿಕೆ ನೀಡಿ ಸಾರ್ವಜನಿಕರಲ್ಲಿ ಗೊಂದಲವನ್ನುಂಟು ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿದ್ದು, ಈ ರೀತಿಯಾಗಿ ಇವರೇ ಸೃಷ್ಟಿಸಿದ ಪ್ರಚೋದನಾಕಾರಿ ಮಾತುಗಳಿಂದ ಸಾರ್ವಜನಿಕರು ಆತಂಕದಲ್ಲಿದ್ದು ಮತ್ತೆ ಅಲ್ಲಲ್ಲಿ ಪ್ರತಿಭಟನೆಯ ಕಿಚ್ಚು ಹೊತ್ತಿಸುವ ಸಾಧ್ಯತೆ ಇದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ನಿವೃತ್ತ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ರವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಬಂಧಿಸಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು ಮತ್ತು ಇವರ ಪೂರ್ವ ಪರ ಸಮಗ್ರವಾದ ಆಂತರಿಕ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರಭು ಪತ್ರದಲ್ಲಿ ಕೋರಿದ್ದಾರೆ. ಮನವಿಯ ಪ್ರತಿಯನ್ನು ಕರ್ನಾಟಕ ಸರಕಾರದ ಗೃಹಸಚಿವರು, ಪೋಲೀಸ್ ಮಹಾ ನಿರ್ದೇಶಕರು ಕರ್ನಾಟಕ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ದ.ಕ.ಮತ್ತು ಬಂಟ್ವಾಳ ವೃತ ನಿರೀಕ್ಷಕರಿಗೂ ರವಾನಿಸಿದ್ದಾರೆ.
ಬಂಟ್ವಾಳ: ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಭಾರತ ಸರಕಾರವು ಮಂಡಿಸಿದ ಪೌರತ್ವ ತಿದ್ದುಪಡಿ ಕಾಯ್ದೆ ಬಿಲ್ ಅನುಮೋದನೆಯಾಗಿದ್ದು, ನಿವೃತ್ತ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಈ ಕಾಯಿದೆಯ ವಿರುದ್ದ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಸುವ ಹೇಳಿಕೆ ನೀಡಿ ಸಮಾಜವನ್ನು ಛಿದ್ರಗೊಳಿಸುವ ಹುನ್ನಾರ ನಡೆಸುತ್ತಿರುವ ಹಿನ್ನಲೆಯಲ್ಲಿ ಅವರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡುವಂತೆ ಬಂಟ್ವಾಳ ತಾಪಂ ಸದಸ್ಯ ಪ್ರಭಾಕರ ಪ್ರಭು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.