ಬಂಟ್ವಾಳ: ಎನ್ ಆರ್ ಸಿ, ಸಿಎಎ ಹಾಗೂ ಎನ್ ಪಿ ಆರ್ ವಿರುದ್ಧ ಜ. 15ರಂದು ಮಂಗಳೂರು ಹೊರವಲಯದ ಅಡ್ಯಾರ್ ಕಣ್ಣೂರು ಮೈದಾನದಲ್ಲಿ ನಡೆಯುವ ಬೃಹತ್ ಪ್ರತಿಭಟನಾ ಸಭೆಗೆ ಬಂಟ್ವಾಳ ತಾಲೂಕಿನಿಂದ 25ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು, ಮುಸ್ಲಿಂ ವರ್ತಕರ ಅಂಗಡಿ ಮುಂಗಟ್ಟುಗಳು ಬಂದ್ ಆಗಲಿವೆ ಎಂದು ಎನ್ ಆರ್ ಸಿ ವಿರೋಧಿ ಹೋರಾಟ ಸಮಿತಿ ಬಂಟ್ವಾಳ ತಾಲೂಕು ಅಧ್ಯಕ್ಷ ಎಸ್. ಮುಹಮ್ಮದ್ ಶಫಿ ಅವರು ತಿಳಿಸಿದ್ದಾರೆ.

ಅವರು ಮಂಗಳವಾರ ಬಿ‌.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಜಿಲ್ಲೆಯಲ್ಲೆ ಒಂದು ಐತಿಹಾಸಿಕ ಪ್ರತಿಭಟನಾ ಸಭೆಯಾಗಿ ಮೂಡಿ ಬರಲಿದ್ದು, ಲಕ್ಷಾಂತರ ಜನರು ಇದಕ್ಕೆ ಸಾಕ್ಷಿಯಾಗಲಿದ್ದಾರೆ. ಆದುದರಿಂದ ಸಂವಿಧಾನವನ್ನು ಎತ್ತಿ ಹಿಡಿಯುವ ಎಲ್ಲ ಜಾತಿ ಮತ ಧರ್ಮಗಳ, ಎಲ್ಲ ಜಾತ್ಯಾತೀತ ತತ್ವವನ್ನು ಬೆಂಬಲಿಸುವ ಪಕ್ಷಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿದೆ ಎಂದು ವಿನಂತಿಸಿಕೊಂಡರು.
ಕೇಂದ್ರ ಸರಕಾರದ ಸಂವಿಧಾನ ವಿರೋಧಿ ಪೌರತ್ವ ಕಾಯ್ದೆ ವಿರುದ್ಧ ಇಂದು ದೇಶಾದ್ಯಂತ ಪೌರರು ಬೀದಿಗಿಳಿದಿದ್ದು 2ನೇ ಸ್ವಾತಂತ್ರ್ಯ ಸಂಗ್ರಾಮ ಸಮರವಾಗಿ ಮಾರ್ಪಟ್ಟಿದೆ. ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುವುದರ ಮೂಲಕ ಈ ದೇಶದ ಆದಿವಾಸಿಗಳ, ಬುಡಕಟ್ಟು ಜನಾಂಗದ ದಲಿತರ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕನ್ನು ಕಸಿದಿದ್ದಲ್ಲದೆ, ಭಾರತೀಯರನ್ನು ಒಡೆದು ಆಳುತ್ತಿದೆ ಎಂದು ಹೇಳಿದರು.
ದೀನದಲಿತರ ಧ್ವನಿ ರಾಷ್ಟ್ರಪಿತ ಗಾಂಧೀಜಿಯ ಮೇಲೆ ಕೆಲವರು ಆಕ್ರೋಶ ಪ್ರಕಟ ಪಡಿಸುತ್ತಿದ್ದಾರೆ. ಅಂತಹವರ ಕೈಯಲ್ಲೇ ಈಗ ಅಧಿಕಾರವಿರುವುದರಿಂದ ಗಾಂಧೀಜಿಯ ಕಲ್ಪನೆಯ ರಾಮ ರಾಜ್ಯ ಒಂದು ಕನಸೇ ಸರಿ ಎಂದು ಹೇಳಿದರು.
ಬಂಟ್ವಾಳದಲ್ಲಿ ಬೃಹತ್ ಸಮಾವೇಶ:
ಬಂಟ್ವಾಳ ತಾಲೂಕು ಮಟ್ಟದ ಎನ್.ಆರ್.ಸಿ ವಿರೋಧಿ ಹೋರಾಟ ಸಮಿತಿಯಿಂದ ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದ ಅಧೀನದಲ್ಲಿರುವಂತಹ ರೈಲ್ವೆ ನಿಲ್ದಾಣಗಳಲ್ಲಿ ರೈಲ್ವೇ ರೋಕು ಚಳವಳಿ, ಅಂಚೆ ಇಲಾಖೆ, ಟೆಲಿಫೋನ್ ಇಲಾಖೆ ಹಾಗೂ ಇತರ ಇಲಾಖೆಗಳ ಮುಂದೆ ಕಾನೂನಿನ ಚೌಕಟ್ಟಿನೊಳಗೆ ನಿರಂತರ ಧರಣಿ ನಡೆಸುವ ಬಗ್ಗೆ ಚಿಂತಿಸಲಾಗುತ್ತಿದೆ. ಬಂಟ್ವಾಳದಲ್ಲಿ ಎಲ್ಲ ಪಕ್ಷಗಳ ಸಾವಿರಾರು ಕಾರ್ಯಕರ್ತರನ್ನು ಸೇರಿಸಿ ಬೃಹತ್ ಸಮಾವೇಶವನ್ನು ನಡೆಸಲಾಗುವುದು ಎಂದರು.
ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬ್ ಸೈಯದ್ ಯಹ್ಯಾ ತಂಙಳ್ ಮಾತನಾಡಿ, ಕೇಂದ್ರ ಸರಕಾರ ಈ ಮೂರು‌ ಕಾಯ್ದೆಗಳನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟ ನಿರಂತರವಾಗಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಕೆಎಸ್ಸೆಫ್ ನ ಉಸ್ಮಾನ್ ದಾರಿಮಿ, ಮುಖಂಡರಾದ ಪಿ.ಎ. ರಹೀಂ, ಕೆ.ಎಚ್. ಅಬೂಬಕರ್, ಪುರಸಭಾ ಸದಸ್ಯ ಮುನಿಶ್ ಅಲಿ ಅಹ್ಮದ್, ಎಸ್ಸೆಸ್ಸೆಫ್ ನ ಆರೀಸ್ ಪೆರಿಯಪಾದೆ, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸಲಫಿ ಮೂಮೆಂಟ್ ನ ಬಿ.ಎಂ. ಅಬ್ದುಲ್ ಅಝೀಝ್, ಹಾರೂನ್ ರಶೀದ್ ಹಾಜರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here