ಬಂಟ್ವಾಳ: ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಅಧಿಕಾರಿಗಳು ಸರಕಾರಿ ಕಾರ್ಯಕ್ರಮ ಇನ್ನು ಮುಂದೆ ಮಾಡಿದರೆ ಹುಷಾರ್ ಎಂದು ಶಾಸಕ ರಾಜೇಶ್ ನಾಯ್ಕ್ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸರಕಾರಿ ಕಾರ್ಯಕ್ರಮ ಮಾಡುವಾಗ ಚುನಾಯಿತ ಜನಪ್ರತಿನಿಧಿಗಳಿಗೆ ಯಾವುದೇ ಮಾಹಿತಿ ನೀಡದೆ ಕಾರ್ಯಕ್ರಮ ಮಾಡುವ ಬಗ್ಗೆ ದೂರುಗಳು ಬಂದಿದ್ದು, ಇನ್ನು ಮುಂದೆ ಸರಕಾರಿ ಕಾರ್ಯಕ್ರಮಗಳು ಕಾಟಾಚಾರಕ್ಕೆ ನಡೆಯದೆ ಫಲಾನುಭವಿಗಳಿಗೆ ಪ್ರಯೋಜನ ಎಂದು ಅವರು ತಿಳಿಸಿದರು. ‌
ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡದೆ ಯೋಜನೆಗಳನ್ನು ಹಾಳು ಮಾಡುವುದು ಅಧಿಕಾರಿಗಳು ಎಂದು ಶಾಸಕರು ಗರಂ ಆದರು.
ಸಜೀಪ ಮುನ್ನೂರು ಏತ ನೀರಾವರಿ ಯೋಜನೆಗೆ ಮೆಸ್ಕಾಂ ಇಲಾಖೆಯ ಉದಾಸೀನ ಮನೋಭಾವದಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಅಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲದೆ ಇದ್ದಾಗ ಜನರಿಗೆ ತೊಂದರೆಯಾಗುತ್ತದೆ, ಇದಕ್ಕೆ ಅವಕಾಶ ನೀಡುವುದಿಲ್ಲ, ಕೂಡಲೇ ವಿದ್ಯುತ್ ಸಂಪರ್ಕ ನೀಡಿ, ಜನರಿಗೆ ನೀರು ಕೊಡಿ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
ಪಶುಸಂಗೋಪನೆ ಇಲಾಖೆಯ ವತಿಯಿಂದ ಉತ್ತಮ ತಳಿಯ ಕರುಗಳನ್ನು ರೈತರಿಗೆ ನೀಡುವ ಕೆಲಸ ಮಾಡಿ, ಆ ಮೂಲಕ ರೈತರು ಹೈನುಗಾರಿಕೆಯಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ, ಜೊತೆಗೆ ಮಧ್ಯವರ್ತಿಗಳಿಂದ ಮೋಸ ಹೊಗುವುದು ತಪ್ಪುತ್ತದೆ ಮತ್ತು ಕೃಷಿಕರಿಗೆ ಸರಿಯಾದ ಮಾಹಿತಿ ನೀಡುವ ಕೆಲಸ ಆಗಬೇಕಾಗಿದೆ ಎಂದರು.

ಅವರು ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಸಿ ಮಾತನಾಡಿದರು.‌

ಅಧಿಕಾರಿಗಳು ಕಾನೂನು ಹೇಳಿ ಜನರಿಗೆ ತೊಂದರೆ ಕೊಡುತ್ತಿದ್ದೀರಿ. ಜನರಿಗೆ ಪ್ರಯೋಜನಕ್ಕೆಂದು ಇರುವ ಇಲಾಖೆಗಳು ಕಾನೂನಿನ ನೆಪದಲ್ಲಿ ತೊಂದರೆ ಕೊಡುವುದು ಸರಿಯಲ್ಲ , ಹೊಂದಾಣಿಕೆಯಿಂದ ಕೆಲಸ ಮಾಡಿ ಎಂದು ಅವರು ತಿಳಿಸಿದರು.

ಅಧಿಕಾರಿಗಳು ಕೆಲಸ ಮಾಡದೆ ಇರುವಾಗ ಜನರು ಜನಪ್ರತಿನಿಧಿಗಳಾದ ನಮಗೆ ಬೈಯುತ್ತಾರೆ, ನಾವು ಸಭೆಯಲ್ಲಿ ಅಧಿಕಾರಿಗೆ ಬೈಯ್ಯದೆ ಯಾರನ್ನು ಬೈಯ್ಯುವುದು ಎಂದು ಜಿ.ಪಂ.ಸದಸ್ಯ ತುಂಗಪ್ಪ ಹಾಸ್ಯಭರಿತ ಮಾತುಗಳನ್ನಾಡಿದರು.

ಪುಂಜಾಲಕಟ್ಟೆ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಇಲ್ಲದೆ ರೋಗಿಗಳಿಗೆ ಸಾಕಷ್ಟು ತೊಂದರೆ ಅಗುತ್ತಿದೆ, ಇಲ್ಲಿ ಪೂರ್ಣಾವಧಿಯ ವೈದ್ಯರನ್ನು ನೇಮಿಸುವಂತೆ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಒತ್ತಾಯಿಸಿದರು.

ಈ ಆಸ್ಪತ್ರೆಯಲ್ಲಿ ಆಯುಷ್ ವೈದ್ಯರು ಇದ್ದಾರೆ ಡಾಕ್ಟರ್ ಕೊರತೆಯಿರುವುದರಿಂದ ಸದ್ಯ ಸಮಸ್ಯೆ ಅಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ದೀಪ ಪ್ರಭು ತಿಳಿಸಿದರು. ‌
ಫಾರ್ಮಸಿ, ಲ್ಯಾಬ್ ಟೆಕ್ನಿಷಿಯನ್ ಸ್ಟಾಪ್ ನರ್ಸ್ ಗಳ ಕೊರತೆಯಿರುವುದರಿಂದ ಗುತ್ತಿಗೆ ಅಧಾರದಲ್ಲಿ ನೇಮಕ ಮಾಡುವಂತೆ ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್ ತಿಳಿಸಿದರು.

ಶಾಲಾ ಪೀಠೋಪಕರಣ ಹಾಗೂ ರಿಪೇರಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದೆ ಹಣ ವಾಪಾಸು ಹೋಗುತ್ತಿದೆ. ಕೆಲಸ ಮಾಡಲು ಮನಸ್ಸು ಇಲ್ಲದ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ವರ್ಗಾವಣೆ ಮಾಡಿ ಎಂದು ಜಿ.ಪಂ.ಸದಸ್ಯ ಎಂ.ತುಂಗಪ್ಪ ಸಭೆಯಲ್ಲಿ ಅಧ್ಯಕ್ಷರಿಗೆ  ತಿಳಿಸಿದರು.
ಬಂಟ್ವಾಳ ತಾಲೂಕಿನ ಒಟ್ಟು ವಿಸ್ತೀರ್ಣ ಹಾಗೂ ಸರಕಾರಿ ಜಮೀನಿನ ವಿಸ್ತೀರ್ಣ ದ ಸಂಪೂರ್ಣ ಸರ್ವೇ ನಡೆಸಿ ಮಾಹಿತಿ ನೀಡುವಂತೆ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಸರ್ವೇ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಶಾಸಕರಲ್ಲಿ ಮನವಿ ಮಾಡಿದರು. ಕಿಸಾನ್ ಸಮ್ಮಾನ್ ಯೋಜನೆಯ ಬಗ್ಗೆ ಸಭೆಯಲ್ಲಿ ಮಾಹಿತಿ ಕೇಳಿದಾಗ ,
ಕಿಸಾನ್ ಸಮ್ಮಾನ್ ಯೋಜನೆ 29, 000 ನೋಂದಣಿ ಮಾಡಲಾಗಿದೆ, ತಾಂತ್ರಿಕ ಕಾರಣಗಳಿಂದ ಕೆಲವರಿಗೆ ಯೋಜನೆಯ ಲಾಭ ಲಭ್ಯವಾಗಿಲ್ಲ ಕೃಷಿ ಇಲಾಖಾ ಅಧಿಕಾರಿ ನಾರಾಯಣ ಶೆಟ್ಟಿ ಆಧ್ಯಕ್ಷರ ಗಮನಕ್ಕೆ ತಂದರು.
ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಂಚಿನಡ್ಕ ಪದವು ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಸಂಸ್ಕರಣಾ ಕೆಲಸಕ್ಕೆ ಶೀಘ್ರವಾಗಿ ತಯಾರು ಮಾಡಿ,
ಮುಂದಿನ 15 ದಿನದೊಳಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ತ್ಯಾಜ್ಯ ವನ್ನು ಕಂಚಿನಡ್ಕ ಪದವಿನ ತ್ಯಾಜ್ಯ ಘಟಕಕ್ಕೆ ಹಾಕುವ ಕೆಲಸ ಕಾರ್ಯಗಳು ನಡೆಯಬೇಕು ಮತ್ತು ಸರಿಯಾಗಿ ನಿರ್ವಹಣೆ ಮಾಡಲು ಪುರಸಭಾ ಅಧಿಕಾರಿ ಲೀನಾ ಬ್ರಿಟ್ಟೋ ಅವರಿಗೆ ಶಾಸಕರು ಸೂಚಿಸಿದರು.
ಕೆ.ಎಸ್.ಆರ್.ಟಿ.ಸಿ.ಬಸ್ ಗಳ ಬಗ್ಗೆ ಸಾಕಷ್ಟು ಸಮಸ್ಯೆಗಳ ದೂರುಗಳಿದ್ದು ಅವಶ್ಯವಾಗಿ ಕೆ.ಎಸ್.ಆರ್.ಟಿ.ಸಿ.ಅದಾಲತ್ ನಡೆಯಬೇಕು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ತಹಶೀಲ್ದಾರ್ ರಶ್ಮಿ.ಎಸ್.ಆರ್. ಉಪಸ್ಥಿತರಿದ್ದರು. ‌

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here